ನವದೆಹಲಿ: ಬ್ಯಾಂಕುಗಳಲ್ಲಿ ಸಾಲ ಪಡೆಯಲು ನಾವು ಅಡಮಾನವಾಗಿ ಇಡುವ ಮನೆಪತ್ರ, ಇನ್ಷೂರೆನ್ಸ್ ಸರ್ಟಿಫಿಕೇಟ್ ಇತ್ಯಾದಿ ಮೂಲ ಆಸ್ತಿಪತ್ರಗಳು ಕಳೆದುಹೋದರೆ ಏನು ಗತಿ? ಇಂಥ ಕೆಲ ಪ್ರಕರಣಗಳು ಬೆಳಕಿಗೆ ಬಂದಿರುವುದುಂಟು. ಇದೀಗ ಆರ್ಬಿಐ ಈ ನಿಟ್ಟಿನಲ್ಲಿ ಗಮನ ಹರಿಸಿದ್ದು, ಸಾಲ ಪಡೆಯುವವರ ಆಸ್ತಿ ದಾಖಲೆಗಳು ಬ್ಯಾಂಕ್ನಲ್ಲಿ ಕಳೆದುಹೋಗಿದ್ದರೆ ಆ ಗ್ರಾಹಕರಿಗೆ ಬ್ಯಾಂಕುಗಳು ಪರಿಹಾರ ನೀಡಬೇಕು. ಜೊತೆಗೆ ದಂಡವನ್ನೂ ಕಟ್ಟಿಕೊಡಬೇಕಾಗುವಂತಹ ನಿಯಮ ಮಾರಿ ಮಾಡಲು ಹೊರಟಿದೆ.
ಬ್ಯಾಂಕುಗಳು ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿ ಗ್ರಾಹಕರಿಗೆ ನೀಡಲಾಗುವ ಸೇವೆಯ ಮಟ್ಟವನ್ನು ಪರಿಶೀಲಿಸಲು ಆರ್ಬಿಐ ಕಳೆದ ವರ್ಷ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತ್ತು. ಮಾಜಿ ಡೆಪ್ಯೂಟಿ ಆರ್ಬಿಐ ಗವರ್ನರ್ ಬಿ.ಪಿ. ಕಣುಂಗೋ ನೇತೃತ್ವದ ಈ ಸಮಿತಿ ಹಲವು ಶಿಫಾರಸುಗಳನ್ನು ಒಳಗೊಂಡಿರುವ ತನ್ನ ವರದಿಯನ್ನು ಇದೇ ಏಪ್ರಿಲ್ ತಿಂಗಳಲ್ಲಿ ರಿಸರ್ವ್ ಬ್ಯಾಂಕ್ಗೆ ಸಲ್ಲಿಸಿತ್ತು. ಆಸ್ತಿಪತ್ರ ಕಳೆದುಹೋದಾಗ ಬ್ಯಾಂಕುಗಳು ಗ್ರಾಹಕರಿಗೆ ಪರಿಹಾರ ಮತ್ತು ದಂಡ ಕಟ್ಟಿಕೊಡಬೇಕೆನ್ನುವುದು ಈ ಸಮಿತಿ ಮಾಡಿದ ಶಿಫಾರಸುಗಳಲ್ಲಿ ಸೇರಿದೆ.