ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ 20 ಸ್ಥಾನ: ಸಿಎಂ ಸಿದ್ದರಾಮಯ್ಯ

ನಂಜನಗೂಡು (ಜೂ.11): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ 20 ಸ್ಥಾನಗಳಲ್ಲಿ ಗೆಲ್ಲಲಿದ್ದು, ಕೇಂದ್ರದಲ್ಲಿಯೂ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವರುಣ ಕ್ಷೇತ್ರದ ಬಿಳಿಗೆರೆ ಬೋರೆಯಲ್ಲಿ ಶನಿವಾರ ನಡೆದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ನಮ್ಮ ಸರ್ಕಾರ ಗ್ಯಾರಂಟಿ ಜಾರಿಗೊಳಿಸಿದ ಮೇಲೆ ಬಿಜೆಪಿ ನಾಯಕರಿಗೆ ಹೇಳಲು ಏನೂ ಇಲ್ಲದಾಗಿದೆ. ಆದ್ದರಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಗೊತ್ತಾಗಿ ಅವರಿಗೆ ನಡುಕ ಶುರುವಾಗಿದೆ ಎಂದರು.

ಸಮಾರಂಭದಲ್ಲಿ ಗೊಬ್ಬರ ಬೆಲೆ ಕಡಿಮೆ ಮಾಡುವಂತೆ ರೈತರಿಂದ ಕೂಗು ಕೇಳಿ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಗೊಬ್ಬರ ಬೆಲೆ ಕಡಿಮೆ ಮಾಡುವುದು ಕೇಂದ್ರ ಸರ್ಕಾರ, ನಾನಲ್ಲ. ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರನ್ನು ಸೋಲಿಸಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಆಗ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ, ಗೊಬ್ಬರದ ಬೆಲೆಯೂ ಕಡಿಮೆಯಾಗಲಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆ ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲೂ ಕಾಂಗ್ರೆಸ್‌ ಗೆದ್ದಿದೆ. 8 ಜಿಲ್ಲೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನೂ ಗೆದ್ದಿಲ್ಲ.

ಆದ್ದರಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ ಎಂದರು. ಪ್ರಧಾನಿ ಮೋದಿಯವರು ಕಾಂಗ್ರೆಸ್‌ನ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದರೆ ದೇಶ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಅವರಿಂದ ಈ ಹೇಳಿಕೆ ನಿರೀಕ್ಷಿರಲಿಲ್ಲ. ಅವರು ಜನರ ಪರವಾಗಿ ಗ್ಯಾರಂಟಿ ಅನುಷ್ಠಾನಗೊಳಿಸಲು ನೆರವಾಗಬೇಕಿತ್ತು. ಆದರೆ, ಟೀಕೆ ವ್ಯಕ್ತಪಡಿಸಿ ರಾಜಕೀಯ ಪ್ರಾರಂಭಿಸಿದ್ದಾರೆ. 2013ರಲ್ಲಿ ಕಾಂಗ್ರೆಸ್‌ ಸರ್ಕಾರ ಕೊಟ್ಟ165 ಭರವಸೆಗಳಲ್ಲಿ 159 ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದೇವು. 

ಈ ಬಾರಿಯೂ ಕೂಡ ಎಷ್ಟೇ ಹಣ ಖರ್ಚಾದರೂ ಸಹ ಚುನಾವಣಾ ಭರವಸೆಗಳನ್ನು ಅನುಷ್ಠಾನಗೊಳಿಸುತ್ತೇವೆ. ಆದರೆ, ಬಿಜೆಪಿ ಕೊಟ್ಟಭರವಸೆ ಈಡೇರಿಸದೆ ವಚನಭ್ರಷ್ಟವಾಗಿದೆ ಎಂದರು. ಜಿಎಸ್‌ಟಿ ನ್ಯಾಯಯುತ ಪಾಲಿಗೆ ಒತ್ತಾಯ: ರಾಜ್ಯದ ಪಾಲಿನ ಜಿಎಸ್‌ಟಿ ಹಣಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ. ಜಿಎಸ್‌ಟಿ ಸೇರಿದಂತೆ ರಾಜ್ಯದ ಪಾಲಿಗೆ ನ್ಯಾಯಯುತವಾಗಿ ಬರಬೇಕಿರುವ ಎಲ್ಲಾ ಅನುದಾನಗಳನ್ನು ಒತ್ತಾಯ ಪೂರ್ವಕವಾಗಿ ಕೇಳುತ್ತೇವೆ ಎಂದು ಅವರು ಭರವಸೆ ನೀಡಿದರು.