ನಮ್ಮ ಮೆಟ್ರೋ ಕಾಮಗಾರಿಯಲ್ಲಿ ಇಲ್ಲಿಯವರೆಗೆ 30 ಕ್ಕೂ ಹೆಚ್ಚು ಜನರ ಸಾವು

ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿಯಲ್ಲಿ ಇಲ್ಲಿಯವರೆಗೆ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದರೆ ಬೆಂಗಳೂರು  ರೈಲು ಕಾರ್ಪೊರೇಷನ್ ಲಿಮಿಟೆಡ್ ತನ್ನ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಖಾಸಗಿ ಸುದ್ದಿ ಸಂಸ್ಥೆ ಡೆಕ್ಕನ್​ ಹೆರಾಲ್ಡ್​​ ವರದಿ ಮಾಡಿದೆ. 2007 ರಲ್ಲಿ ಮೆಟ್ರೋ ನಿರ್ಮಾಣ ಕಾಮಗಾರಿ ಪ್ರಾರಂಭವಾದ ನಂತರ 38 ಜನರು ಸಾವನ್ನಪ್ಪಿದ್ದಾರೆ. 50 ಜನರು ಗಾಯಗೊಂಡಿದ್ದಾರೆ.

2023 ರ ಜನವರಿಯಲ್ಲಿ ಅಪಘಾತವನ್ನು ಹೊರತುಪಡಿಸಿ, ಎಲ್ಲಾ ಅಪಘಾತಗಳು ಗುತ್ತಿಗೆ ಸಿಬ್ಬಂದಿಯನ್ನು ಒಳಗೊಂಡಿವೆ. ಬಿಎಂಆರ್​​​ಸಿಎಲ್​​ ರೀಚ್ 2 ವಿಸ್ತರಣೆಯಲ್ಲಿ (ಪರ್ಪಲ್ ಲೈನ್‌ನ ಪಶ್ಚಿಮ ಭಾಗ) ಕೇವಲ ಎರಡು ಸಾವುಗಳು ಸಂಭವಿಸಿವೆ ಎಂದು ಹೇಳಿದೆ.

ಬಿಎಂಆರ್​ಸಿಎಲ್​​ನ ಗೊಟ್ಟಿಗೆರೆಯಿಂದ ರೀಚ್ 6 ಎಲಿವೇಟೆಡ್ ಭಾಗದ ಕಾಮಗಾರಿಯಲ್ಲಿ ಡೆಲಿವರಿ ಬಾಯ್ ಸುಶೀಲ್ ಕಾಂಚನ್ ಮತ್ತು ಆನಂದಪ್ಪ ಇಬ್ಬರು ಸಾರ್ವಜನಿಕರು ಮೃತಪಟ್ಟಿದ್ದರು. ಒಟ್ಟು ಕಾಮಗಾರಿಯಲ್ಲಿ ಈ ಇಬ್ಬರು ಸೇರಿದಂತೆ ಏಳುನರು ಸಾವನ್ನಪ್ಪಿದ್ದರು.

ಆದರೆ ಸುಶೀಲ್ ಅವರ ಕುಟುಂಬಕ್ಕೆ ಗುತ್ತಿಗೆದಾರರು ಪಾವತಿಸಿದ ಪರಿಹಾರದ ಮೊತ್ತವನ್ನು ಬಹಿರಂಗವಾಗಿಲ್ಲ. ಆನಂದಪ್ಪ ಅವರ ಕುಟುಂಬದ ಯಾರೂ ಪರಿಹಾರವನ್ನು ಪಡೆಯಲು ಆಸಕ್ತಿ ತೋರಿಸಲಿಲ್ಲ. ಇನ್ನು ಸಾವನ್ನಪ್ಪಿದ ಇತರ 29 ಜನರ ಕುಟುಂಬಕ್ಕೆ ನೀಡಿದ ಪರಿಹಾರದ ಬಗ್ಗೆ ಬಿಎಂಆರ್​ಸಿಎಲ್​ ಮಾಹಿತಿ ಬಹಿರಂಗಪಡಿಸಿಲ್ಲ.

ಜನವರಿಯಲ್ಲಿ ಎಚ್‌ಬಿಆರ್ ಲೇಔಟ್‌ನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮತ್ತು ಮಗು ಸಾವನ್ನಪ್ಪಿದ ಪ್ರಕರಣದಲ್ಲಿ ಬಿಎಂಆರ್‌ಸಿಎಲ್ ಮೂವರು ಇಂಜಿನಿಯರ್‌ಗಳನ್ನು ಅಮಾನತುಗೊಳಿಸಿ, ಗುತ್ತಿಗೆದಾರರಿಗೆ 15 ಲಕ್ಷ ರೂಪಾಯಿ ದಂಡ ವಿಧಿಸಿ ಅವರಿಂದ ಕಾರಣ ಕೇಳಿದೆ. ಗುತ್ತಿಗೆದಾರರು, ಮೂವರು ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.

ಇದುವರೆಗೆ ಗುತ್ತಿಗೆದಾರರು ಸಂತ್ರಸ್ತರ ಕುಟುಂಬಗಳಿಗೆ 3.15 ಕೋಟಿ ರೂಪಾಯಿ ಪರಿಹಾರ ನೀಡಿದ್ದರೇ, ಈವರೆಗೆ ಬಿಎಂಆರ್​ಸಿಎಲ್​ ಗುತ್ತಿಗೆದಾರರಿಗೆ 1.77 ಕೋಟಿ ರೂಪಾಯಿವರೆಗೆ ದಂಡ ವಿಧಿಸಿದೆ.