ಬೆಂಗಳೂರು: ಮೂರು ಪಟ್ಟು ವಿದ್ಯುತ್ ಬಿಲ್ ಹೆಚ್ಚಳ ಮಾಡುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಗೃಹ ಜ್ಯೋತಿಗಾಗಿ ಕಾಯುತ್ತಿರುವ ಜನರ ಜೇಬಿಗೆ ಕತ್ತರಿ ಹಾಕಿದೆ. ವಿದ್ಯುತ್ ಹೊಂದಾಣಿಕೆ ದರ ಹಾಗೂ ಹೆಚ್ಚುವರಿ ಶುಲ್ಕದ ಹೆಸರಿನಲ್ಲಿ ರಾಜ್ಯದ ಎಲ್ಲಾ ಎಸ್ಕಾಂಗಳಲ್ಲೂ ವಿದ್ಯುತ್ ದರ ಏರಿಕೆ ಮಾಡಲಾಗಿದ್ದು, ಕಳೆದ ಬಿಲ್ಗೂ ಈ ತಿಂಗಳ ಬಿಲ್ಗೂ ಹೊಂದಾಣಿಕೆಯೇ ಆಗುತ್ತಿಲ್ಲ. ಬಿಲ್ಗಳಲ್ಲಿ ಬಾಕಿ ಮೊತ್ತ ಎಂದು ನಮೂದಿಸಿ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಅಂತ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ.
ಏಪ್ರಿಲ್ ತಿಂಗಳಿನಿಂದಲೇ ಕೆಇಆರ್ಸಿ ವಿದ್ಯುತ್ ದರ ಏರಿಕೆ ಮಾಡಿತ್ತು. ಆದರೆ ಚುನಾವಣೆ ಹಿನ್ನಲೆ ಬಿಜೆಪಿ ಇದಕ್ಕೆ ತಡೆ ನೀಡಿತ್ತು. ಈಗ ಹೊಸ ಸರ್ಕಾರ ಬರುತ್ತಿದ್ದಂತೆ ಏಪ್ರಿಲ್ ಮೇ ತಿಂಗಳ ಏರಿಕೆ ಮೊತ್ತವನ್ನ ಒಮ್ಮಿಂದೊಮ್ಮೆಲೇ ಸೇರಿಸಿ ಗ್ರಾಹಕರಿಗೆ ಬಿಲ್ ನೀಡಲಾಗುತ್ತಿದೆ. ಕಳೆದ ಬಾರಿ ಮೇ ತಿಂಗಳ ಬಿಲ್ ಮೊತ್ತ 881 ರೂ. ಇದ್ದವರಿಗೆ ಜೂನ್ ತಿಂಗಳ ವಿದ್ಯುತ್ ಬಿಲ್ 2067 ರೂ.ಗೆ ಏರಿಕೆಯಾಗಿದೆ. ಕಳೆದ ಬಾರಿ ಮೇ ತಿಂಗಳ ಬಿಲ್ 3976 ರೂ. ಇದ್ದರೆ ಜೂನ್ ತಿಂಗಳ ಬಿಲ್ 6052 ರೂ.ಗೆ ಏರಿಕೆಯಾಗಿದೆ.
ಕರೆಂಟ್ ಬಿಲ್ನಲ್ಲಿ ಭಾರೀ ಹೆಚ್ಚಳ ಕಂಡು ತಲ್ಲಣಗೊಂಡ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಹೊಸ ಶಿಡೇನೂರು ಗ್ರಾಮದ ಜನರು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಗ್ರಾಮದ ಗಣೇಶನ ದೇವಸ್ಥಾನದಲ್ಲಿ ಸಭೆ ನಡೆಸಿದ ಗ್ರಾಮಸ್ಥರು, ಕರೆಂಟ್ ಬಿಲ್ ಕಟ್ಟದೇ ಇರಲು ನಿರ್ಧರಿಸಿದ್ದಾರೆ. ರೈತರಿಗೆ ಕರೆಂಟ್ ಬಿಲ್ ಹೆಚ್ಚಳದಿಂದ ದಿನನಿತ್ಯ ಸಂಕಷ್ಟ ಎದುರಾಗುತ್ತಿದೆ. ಹೀಗಾಗಿ ಬಿಲ್ ಕಲೆಕ್ಟರ್ಗೆ ಬಹಿಷ್ಕಾರ ಹಾಕಿದ್ದಾರೆ. ಬಿಲ್ ಕಲೆಕ್ಟರ್ ಗ್ರಾಮಕ್ಕೆ ಬರುವ ಹಾಗಿಲ್ಲ, ಬಿಲ್ ಹಾಕುವಂತಿಲ್ಲ. ಒಂದು ವೇಳೆ ಬಿಲ್ ಕಲೆಕ್ಟರ್ ಬಂದರೆ ಆತನನ್ನು ಹೊಡದು ಓಡಿಸುವ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗದ ಆಲ್ಕೋಳ ಬಡಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಹಿಳೆಯರ ಆಕ್ರೋಶ ವ್ಯಕ್ತವಾಗುತ್ತಿದೆ. ತಿಂಗಳ ವಿದ್ಯುತ್ ಬಿಲ್ ಮೂರುಪಟ್ಟು ಹೆಚ್ಚಳವಾಗಿದ್ದನ್ನು ನೋಡಿ ಕಂಗಾಲಾದ ಬಡ ಮಹಿಳೆಯರು, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಹಾಕುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ಬಿಲ್ ಕಟ್ಟಲ್ಲ ಅಂತ ಪಟ್ಟು ಹಿಡಿದಿದ್ದಾರೆ.
ವಿದ್ಯುತ್ ದರ ಹೆಚ್ಚಳದಿಂದ ಕಂಗಾಲಾದ ಹೃದಯ ರೋಗ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆ ಶಕುಂತಲಾ, ಮಗ 6000 ರೂಪಾಯಿ ದುಡಿಯುತ್ತಾನೆ. ಎರಡು ಸಾವಿರ ಕರೆಂಟ್ ಬಿಲ್ ಬಂದಿದೆ. ಹೀಗಾದರೆ ಕುಟುಂಬ ನಿರ್ವಹಣೆ ಮಾಡುವುದು ಹೇಗೆ? ಸರ್ಕಾರದ ಫ್ರೀ ವಿದ್ಯುತ್ ಹೆಸರಲ್ಲಿ ಜನರಿಗೆ ಮೋಸ ಆಗುತ್ತಿದೆ. ಫ್ರೀ ವಿದ್ಯುತ್ ಆಗತ್ಯವಿಲ್ಲವೆಂದು ಆಕ್ರೋಶ ಮಾತನ್ನಾಡಿದ್ದಾರೆ.
ವಿದ್ಯುತ್ ದರ ಹೆಚ್ಚಳ ಹಿನ್ನೆಲೆ ಧಾರವಾಡದಲ್ಲಿ ಸರ್ಕಾರದ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಲ್ ಕಲೆಕ್ಟರ್ ಬಂದು ವಿದ್ಯುತ್ ಬಿಲ್ ಕೊಡುತ್ತಿದ್ದಂತೆಯೇ ಬೀದಿಗಿಳಿದ ಮುರುಘಾಮಠ ಪ್ರದೇಶದ ಜನರು, ಮೊದಲಿಗಿಂತ ಈಗ ಒಂದೂವರೆ ಪಟ್ಟು ಬಿಲ್ ಬಂದಿದೆ. ನಮಗೆ ಯಾವುದೇ ಉಚಿತ ವಿದ್ಯುತ್ ಬೇಡ, ಮೊದಲಿನಂತೆಯೇ ಇರಲಿ. ಹೀಗಾದರೆ ಜನ ಬದುಕುವುದು ಹೇಗೆ? ಹೀಗೆ ಮಾಡಿದರೆ ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಅಂತಾ ಮಹಿಳೆಯರು ಹಿಡಿ ಶಾಪ ಹಾಕಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಬಿಲ್ ಹೆಚ್ಚಳದ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಇದಕ್ಕೆ ಬ್ರೇಕ್ ಹಾಕಲಾಗಿತ್ತು. ಇದೀಗ ಹೊಸ ಸರ್ಕಾರ ಬಂದೊಡನೆ ವಿದ್ಯುತ್ ದರದಲ್ಲಿ ಭಾರೀ ಏರಿಕೆ ಮಾಡಲಾಗಿದೆ. ಬಿಜೆಪಿ ಅವಧಿಯಲ್ಲಿ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದರೂ ಕಾಂಗ್ರೆಸ್ ಸರ್ಕಾರ ಯಾಕೆ ಮೌನವಹಿಸಿದೆ? ದರ ಇಳಿಕೆಗೆ ಯಾಕೆ ಮುಂದಾಗುತ್ತಿಲ್ಲ ಅಂತಾ ಜನ ಪ್ರಶ್ನಿಸುತ್ತಿದ್ದಾರೆ.