ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಂಗೈ ಅಗಲ ಜಾಗ ಸಿಗೋದು ಕಷ್ಟ. ಮೂರಡಿ ಜಾಗಕ್ಕೂ ಕೋಟಿ ಕೋಟಿ ಬೆಲೆ. ಹೀಗಾಗಿ ಆಸ್ತಿ ವಿಚಾರಕ್ಕೆ ಕುಟುಂಬದೊಳಗೆ ಜಗಳ ಹೆಚ್ಚು. ಒಂದೇ ಮನೆಯಲ್ಲಿದ್ದರೂ ಪರಸ್ಪರ ಕಿತ್ತಾಟಗಳು, ಹೊಡೆದಾಟ ಇದ್ದೇ ಇರುತ್ತೆ. ರಕ್ತ ಸಂಬಂಧ ಎಂಬುದನ್ನೂ ಮರೆತು ಆಸ್ತಿಗಾಗಿ ಕಿತ್ತಾಡುತ್ತಾರೆ. ಆದ್ರೆ ನಗರದ ಅಂಜನಾಪುರದಲ್ಲಿ ಶುಭ ಕಾರ್ಯಕ್ರಮ ನಡೆಯುತ್ತಿರುವಾಗಲೇ ಅಣ್ಣನ ಮಗ ಚಿಕ್ಕಪ್ಪನ ಮನೆ ನೆಲಸಮ ಮಾಡಿದ್ದು ಎಫ್ಐಆರ್ ದಾಖಲಾಗಿದೆ . ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪುನೀತ್ ಎಂಬಾತನ ಮೇಲೆ ಎಫ್ಐಆರ್ ದಾಖಲಾಗಿದೆ.
ಜೂನ್ 7 ರ ಬೆಳಗ್ಗೆ ಅಂಜನಾಪುರದಲ್ಲಿ ರವಿ ಎಂಬುವವರ ಮನೆಯನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಗಿದೆ. ಸ್ವಂತ ಅಣ್ಣನ ಮಗನೇ ಚಿಕ್ಕಪ್ಪನ ಮನೆ ನೆಲಸಮ ಮಾಡಿದ್ದಾನೆ. ರವಿ ಸೇರಿ 6 ಜನ ಸಹೋದರರಿದ್ದಾರೆ. ಎಲ್ಲಾ ಆಸ್ತಿಯು ಹಿರಿಯ ಸಹೋದರ ಪ್ರಕಾಶ್ ಹೆಸರಿನಲ್ಲಿದೆ. ಆದ್ರೆ ಪ್ರಕಾಶ್ ತನ್ನ ಸಹೋದರರಿಗೆ ವಾಸಿಸಲು ಜಾಗ ನೀಡಿದ್ದರು. ಆದರೆ ಇದುವರೆಗೆ ಯಾರಿಗೂ ಭಾಗ ಮಾಡಿ ನೀಡಿರಲಿಲ್ಲ. ರವಿಗೆ ನೀಡಿದ್ದ ಜಾಗ ನಮ್ಮದು ಎಂದು ಮೂರನೇ ಸಹೋದರ ಶ್ರೀನಿವಾಸ್ ಪುತ್ರ ಪುನೀತ್ ಕಿರಿಕ್ ಮಾಡಿದ್ದಾನೆ.
ಜೂನ್ 7 ರಂದು ರವಿ ಮಗಳ ಧಾರಾಮುಹೂರ್ತ ಕಾರ್ಯಕ್ರಮ ಇತ್ತು. ಹೀಗಾಗಿ ಕುಟುಂಬಸ್ಥರೆಲ್ಲರು ಮಂಟಪಕ್ಕೆ ಹೋಗಿದ್ರು. ಇದೇ ಸರಿಯಾದ ಸಮಯ ಎಂದು ಕೊಂಡ ಪುನೀತ್, ಮೂರು ಜೆಸಿಬಿ ಕರೆಸಿ ರವಿ ವಾಸವಿದ್ದ ಮನೆ ನೆಲಸಮ ಮಾಡಿಸಿದ್ದಾನೆ. ಮಗಳ ಮದುವೆ ಸಂತಸದಲ್ಲಿದ್ದ ಕುಟುಂಬ ಮನೆ ಇಲ್ಲದೆ ಬೀದಿ ಪಾಲಾಗಿದೆ. ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ರವಿ ದೂರು ದಾಖಲಿಸಿದ್ದಾರೆ. ರವಿ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ.