10 ಹಾಗೂ 12ನೇ ತರಗತಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಪ ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಹೆಲಿಕಾಪ್ಟರ್ ರೈಡ್ ಆಯೋಜಿಸಿದೆ. 88 ವಿದ್ಯಾರ್ಥಿಗಳ ಹೆಲಿಕಾಪ್ಟರ್ ಪ್ರಯಾಣದ ಸವಿ ಅನುಭವಿಸಿದ್ದಾರೆ.
ಚತ್ತೀಸಘಡ(ಜೂ.10): ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಉನ್ನತ ವ್ಯಾಸಾಂಗಕ್ಕೆ ಅವಕಾಶ ಸೇರಿದಂತೆ ಹಲವು ನೆರವು ಈಗಾಗಲೇ ಚಾಲ್ತಿಯಲ್ಲಿದೆ. ಇದರ ಜೊತೆಗೆ ಗರಿಷ್ಠ ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಹೆಲಿಕಾಪ್ಟರ್ ರೈಡ್ ಆಯೋಜಿಸಿದೆ. ಚತ್ತೀಸಘಡ ಸರ್ಕಾರ ವಿದ್ಯಾರ್ಥಿಗಳ ಸಾಧನೆಗೆ ಸಣ್ಣ ಪ್ರತಿಫಲ ನೀಡಲು ಹಾಗೂ ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲು ಹೆಲಿಕಾಪ್ಟರ್ ರೈಡ್ ಆಯೋಜಿಸಿದೆ. ಚತ್ತೀಸಘಡದ 88 ವಿದ್ಯಾರ್ಥಿಗಳು ಹೆಲಿಕಾಪ್ಟರ್ ಪ್ರಯಾಣದ ಸವಿ ಅನುಭವಿಸಿದ್ದಾರೆ.
10 ಹಾಗೂ 12ನೇ ತರಗತಿ ಪರೀಕ್ಷೆಗೂ ಮೊದಲು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಭೂಪೇಶ್ ಬಾಗೆಲ್, ಗರಿಷ್ಠ ಅಂಕ ಪಡೆದ ಟಾಪರ್ಸ್‌ಗೆ ಉಚಿತ ಹೆಲಿಕಾಪ್ಟರ್ ರೈಡ್ ಆಯೋಜಿಸುವುದಾಗಿ ಹೇಳಿದ್ದರು. ಇದರಿಂದ ಚತ್ತೀಸಘಡದ 88 ಟಾಪರ್ಸ್ ಗುರುತಿಸಿ ಹೆಲಿಕಾಪ್ಟರ್ ರೈಡ್ ಆಯೋಜಿಸಿದೆ. ವಿದ್ಯಾರ್ಥಿಗಳ ಹೆಲಿಕಾಪ್ಟರ್ ರೈಡ್‌ಗೆ ಶಿಕ್ಷಣ ಸಚಿವ ಪ್ರೇಮ್ ಸಾಯಿ ಸಿಂಗ್ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಸಚಿವ, ಇದು ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುವ ಕಾರ್ಯಕ್ರಮವಾಗಿದೆ ಎಂದರು.
ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ನೀಡಿದ ಭರವಸೆಯಂತೆ ಮಕ್ಕಳಿಗೆ ಉಚಿತ ಹೆಲಿಕಾಪ್ಟರ್ ರೈಡ್ ಆಯೋಜಿಸಲಾಗಿದೆ. ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸರ್ಕಾರ ಎಲ್ಲಾ ನೆರವು ನೀಡುತ್ತದೆ. ಪರೀಕ್ಷೆಗೂ ಮೊದಲು ಮುಖ್ಯಮಂತ್ರಿಗಳು ಟಾಪರ್ಸ್‌ಗೆ ಈ ಭರವಸೆ ನೀಡಿದ್ದರು. ಇದೀಗ ಟಾಪರ್ಸ್ ಗುರುತಿಸಿ ಅವರಿಗೆ ಸರ್ಕಾರದ ವತಿಯಿಂದ ಉಚಿತ ಹೆಲಿಕಾಪ್ಟರ್ ರೈಡ್ ಆಯೋಜಿಸಲಾಗಿದೆ ಎಂದರು.
ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ನೀಡಿದ ಎಲ್ಲಾ ಭರವಸೆಯನ್ನು ಈಡೇರಿಸಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಯೋಜನೆ ರೂಪಿಸುವುದಾಗಿ ಹೇಳಿದ್ದರು. ಇದರಂತೆ ಮಹಿಳೆಯರು ಹಾಗೂ ಮಕ್ಕಳಿಗೆ ಹಲವು ಕಾರ್ಯಕ್ರಮ ರೂಪಿಸಲಾಗಿದೆ. ಇನ್ನು ರೈತರ ಜೀವನ ಮಟ್ಟ, ಕೃಷಿ, ರಸಗೊಬ್ಬರ, ಆರ್ಥಿಕ ನೆರವು ಸೇರಿದಂತೆ ಎಲ್ಲಾ ಸಹಾಯ ಮಾಡಲಾಗಿದೆ. ಮಧ್ಯಮ ವರ್ಗದ ಕುಟುಂಬಕ್ಕೆ ಅಗತ್ಯ ನೆರವು ನೀಡುವ ಹಲವು ಕಾರ್ಯಕ್ರಮಗಳು ಚಾಲ್ತಿಯಲ್ಲಿದೆ. ಎಲ್ಲಾ ವರ್ಗದ ಜನರಿಗೆ ಭೂಪೇಶ್ ಬಾಗೆಲ್ ಕಾರ್ಯಕ್ರಮ ರೂಪಿಸಿ ತಲುಪಿಸಿದ್ದಾರೆ. ಇದೀಗ ವಿದ್ಯಾರ್ಥಿಗಳಿಗೆ ನೀಡಿದ ಮಾತಿನಂತೆ ಹೆಲಿಕಾಪ್ಟರ್ ರೈಡ್ ಆಯೋಜಿಸಿದ್ದಾರೆ. ಮುಂದಿನ ವರ್ಷ ಈ ಸಂಖ್ಯೆ ದುಪ್ಪಟ್ಟಾಗಲಿದೆ. ಇದರ ಲಾಭ ಹಾಗೂ ಸ್ಪೂರ್ತಿಯನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲಿದ್ದಾರೆ ಎಂದು ಪ್ರೇಮ್ ಸಾಯಿ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.