ಬಿಪೊರ್​ಜೊಯ್​​ ಚಂಡಮಾರುತ ಆರ್ಭಟ: ಸಮುದ್ರ ತೀರಗಳಿಗೆ ತೆರಳದಂತೆ ಹವಾಮಾನ ಇಲಾಖೆ ಸೂಚನೆ

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಬಿಪೊರ್​ಜೊಯ್​​ ಆರ್ಭಟ ತೀವ್ರ ಸ್ವರೂಪ ಪಡೆದ ಹಿನ್ನೆಲೆ ಪ್ರವಾಸಿಗರು ಮಂಗಳೂರಿನ ಸಮುದ್ರ ತೀರಗಳಿಗೆ ತೆರಳದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಕಡಲ ತೀರದಲ್ಲಿ ಭಾರೀ ವೇಗವಾಗಿ ಗಾಳಿ ಬೀಸುತ್ತಿದೆ. ಈ ಹಿನ್ನೆಲೆ ಪ್ರಾವಾಸಿಗರು ತೆರಳಬಾರದು ಎಂದು ಸೂಚನೆ ನೀಡಿದೆ. ಚಂಡಮಾರುತ ಭೀತಿ ಹಿನ್ನೆಲೆ ಸಮುದ್ರ ತೀರದ ಅಂಗಡಿಗಳನ್ನು ಮುಚ್ಚಲಾಗಿದೆ.

ಚಂಡಮಾರುತದ ಆರ್ಭಟ ತೀವ್ರ ಸ್ವರೂಪ ಪಡೆದ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 48 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ. ಈ ಹಿನ್ನೆಲೆ ಮುಂದಿನ 3-4 ದಿನಗಳಲ್ಲಿ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಂಭವ ಇದೆ.

ಕರ್ನಾಟಕದ ಕರಾವಳಿ, ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಾಗೇ ಗೋವಾ, ಕೇರಳ, ಲಕ್ಷ ದ್ವೀಪ, ತಮಿಳುನಾಡು, ಆಂಧ್ರಪ್ರದೇಶ, ರಾಜಸ್ಥಾನ, ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಿಜೋರಾಂ, ಮಣಿಪುರ, ಅರುಣಾಚಲಪ್ರದೇಶ, ಮೇಘಾಲಯದಲ್ಲೂ ಮಳೆಯಾಗುವ ಸಾಧ್ಯತೆ ಇದ್ದು ಕಟ್ಟೆಚ್ಚರ ವಹಿಸುವಂತೆ ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಿಪೊರ್ ಜೊಯ್ ಚಂಡಮಾರುತ ಗಂಟೆಗೆ ಎರಡು ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದ್ದು ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಕರಾವಳಿ ಬಿಸಿಲ ಧಗೆಗೆ ನಲುಗಿ ಹೋಗಿದ್ದು, ನೀರಿಗಾಗಿ ಜನರು ತತ್ತರಿಸುತ್ತಿದ್ದಾರೆ. ಎಲ್ಲೆಡೆ ನೀರಿಗಾಗಿ ಹಾಹಾಕಾರ ಕೇಳಿ ಬರುತ್ತಿದೆ. ಈ ನಡುವೆ ನಿನ್ನೆ (ಜೂ.09) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಕರಾವಳಿ ಜನರಲ್ಲಿ ಸಂತಸ ಮೂಡಿಸಿದೆ.

ಮುಂದಿನ ಮೂರು ದಿನಗಳಲ್ಲಿ ಚಂಡಮಾರುತವು ಉತ್ತರ-ವಾಯುವ್ಯ ದಿಕ್ಕಿನಲ್ಲಿ ಚಲಿಸಲಿದೆ ಎಂದು IMD ಹೇಳಿದೆ. ಮುಂದಿನ 48 ಗಂಟೆಗಳಲ್ಲಿ ಕೇರಳಕ್ಕೆ ಮಾನ್ಸೂನ್ ಆಗಮಿಸುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.