ನೂರಾರು ಜೀವಗಳನ್ನು ಉಳಿಸಿದ್ದ ಹೃದ್ರೋಗ ತಜ್ಞ ಹೃದಯಾಘಾತದಿಂದ ಸಾವು

ಗಾಂಧಿನಗರ: ಸಾವಿರಾರು ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಅದೆಷ್ಟೋ ಜೀವಗಳನ್ನು ಉಳಿಸಿದ್ದ 41 ವರ್ಷದ ಹೃದ್ರೋಗ ತಜ್ಞನೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದಿದೆ.

ಜಾಮ್‌ನಗರದ ಖ್ಯಾತ ಹೃದ್ರೋಗ ತಜ್ಞ ಡಾ. ಗೌರವ್ ಗಾಂಧಿ ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಸಾವು ನಗರದಾದ್ಯಂತ ಆಘಾತ ತಂದಿದೆ. ಏಕೆಂದರೆ ಗೌರವ್ ಅವರು ಅಲ್ಲಿನ ಅತ್ಯುತ್ತಮ ಮತ್ತು ಕಿರಿಯ ಹೃದ್ರೋಗ ತಜ್ಞರಲ್ಲಿ ಒಬ್ಬರಾಗಿದ್ದರು ಎನ್ನಲಾಗಿದೆ.

ಗೌರವ್ ಎಂದಿನಂತೆ ಸೋಮವಾರವೂ ಕೆಲವು ರೋಗಿಗಳನ್ನು ಭೇಟಿಯಾಗಿ, ಬಳಿಕ ತಮ್ಮ ಮನೆಗೆ ಮರಳಿ ನಿದ್ರೆಗೆ ಜಾರಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಗೌರವ್ ರಾತ್ರಿ ಊಟಕ್ಕೆ ಸಾಮಾನ್ಯ ಆಹಾರವನ್ನೇ ಸೇವಿಸಿದ್ದರು. ಸ್ವಲ್ಪ ಸಮಯದ ನಂತರ ಅವರು ನಿದ್ರೆಗೆ ಹೋದರು. ಅವರ ವರ್ತನೆಯಲ್ಲಿ ಯಾವುದೇ ಅಸ್ವಸ್ಥತೆ ಇರಲಿಲ್ಲ. ಆ ರಾತ್ರಿ ಯಾವುದೇ ಸಮಸ್ಯೆಗಳನ್ನೂ ಹೇಳಿಕೊಂಡಿರಲಿಲ್ಲ. ಅವರ ಆರೋಗ್ಯ ಸ್ಥಿರವಾಗಿಯೇ ಇತ್ತು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ರಾತ್ರಿ ಆರೋಗ್ಯವಾಗಿಯೇ ಇದ್ದವರು ಮರುದಿನ ಬೆಳಗ್ಗೆ ಹಾಸಿಗೆಯಿಂದ ಏಳಲೇ ಇಲ್ಲ. ಅವರು ಸಾಮಾನ್ಯವಾಗಿ ಬೆಳಗ್ಗೆ 6 ಗಂಟೆಗೆ ಏಳುತ್ತಿದ್ದರು. ಆದರೆ ಅವರು ಏಳದೇ ಹೋಗಿದ್ದನ್ನು ಗಮನಿಸಿ ಕುಟುಂಬಸ್ಥರು ಸ್ವಲ್ಪ ತಡವಾಗಿ ಅವರನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಅವರನ್ನು ಹಾಸಿಗೆಯಿಂದ ಮೇಲಕ್ಕೆತ್ತಲು ಪ್ರಯತ್ನಿಸಿದರೂ ಅವರು ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ. 

ಕೇವಲ 41 ವಯಸ್ಸಿನ ಹೃದ್ರೋಗ ತಜ್ಞನೇ ಹೃದಯಾಘಾತಕ್ಕೆ ಬಲಿಯಾಗಿರುವುದು ಅವರ ಕುಟುಂಬಸ್ಥರಿಗೆ ಹಾಗೂ ಸ್ಥಳೀಯರಿಗೆ ನಂಬಲಾಗದ ವಿಷಯವಾಗಿದೆ ಡಾ. ಗೌರವ್ ತಮ್ಮ ವೈದ್ಯಕೀಯ ಜೀವನದಲ್ಲಿ 16,000ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ.