ಕಾಡುಹಂದಿಗಳ ದಾಳಿಯಿಂದ ಗಾಯಗೊಂಡಿದ್ದ ನಾಲ್ಕು ವರ್ಷದ ಚಿರತೆ ಸಾವು!

ಶಿವಮೊಗ್ಗ :- ಕಾಡುಹಂದಿಗಳ ದಾಳಿಯಿಂದ ಗಾಯಗೊಂಡಿದ್ದ ಸುಮಾರು ನಾಲ್ಕು ವರ್ಷದ ಚಿರತೆ ಸಾವನಪ್ಪಿದ ಘಟನೆ ಶಿಕಾರಿಪುರ ತಾಲೂಕಿನ ಕವಲಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಅರಣ್ಯ ಇಲಾಖೆಯ ಡಿಸಿಎಫ್ ಸಂತೋಷ್ ಕೆಂಚಪ್ಪನವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಜೀವಂತವಾಗಿ ಚಿರತೆ ಹಿಡಿಯಲು ಎರಡು ದಿನ ಕಾರ್ಯಾಚರಣೆ ನಡೆಸಿದರೂ ಫಲಕಾರಿಯಾಗಲಿಲ್ಲ. 

ಕವಲಿ ಗ್ರಾಮದ ಸ್ಥಳೀಯರು ಚಿರತೆಯ ಇರುವಿಕೆಯ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣ ಶಿರಾಳಕೊಪ್ಪ ಅರಣ್ಯಾಧಿಕಾರಿ ಜಾವೇದ್ ಖಾನ್ ಮತ್ತು ತೊಗರ್ಸಿ ಅರಣ್ಯಾಧಿಕಾರಿ ಶಿವಕುಮಾರ್, ಪ್ರವೀಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪೊದೆಯಲ್ಲಿ ಚಿರತೆ ಇರುವುದನ್ನು ಗಮನಿಸಿ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿದರೂ ಅದು ಹೊರಬರಲಿಲ್ಲ. ನಂತರ ಬೋನು ಇಟ್ಟು ಬಂದಿದ್ದಾರೆ. ಮುಂಜಾನೆ ಹೋದಾಗ ಚಿರತೆ ಸ್ಥಳ ಬದಲಾವಣೆ ಮಾಡಿ ಇನ್ನೊಂದು ಸ್ಥಳದಲ್ಲಿ ಅವಿತುಕೊಂಡಿತ್ತು. 

ಬೆಳಗ್ಗೆ ಹನ್ನೊಂದರವರೆಗೆ ಕಾದರೂ ಏನೂ ಶಬ್ದ ಬಾರದಿದ್ದಾಗ ಪೊದೆಯಲ್ಲಿದ್ದ ಚಿರತೆಯ ಸಮೀಪ ಹೋಗಿ ನೋಡಿದಾಗ ಸಾವನ್ನಪ್ಪಿತ್ತು. ತ್ಯಾವರೆಕೊಪ್ಪದ ಲಯನ್ ಸಫಾರಿಯ ವೈದ್ಯ ಮುರಳೀಧರ್  ಚಿರತೆ ಪರಿಶೀಲಿಸಿ ಮೃತಪಟ್ಟಿದ್ದು ದೃಢೀಕರಿಸಿದರು. ಕಾಡುಹಂದಿಗಳ ಬೇಟೆಯಾಡುವಾಗ ಅವುಗಳ ಕೋರೆ ಹಲ್ಲಿನಿಂದ ಚಿರತೆ ಮೇಲೆ ನಡೆದ ದಾಳಿಯಿಂದ ಸೊಂಟ ಮುರಿದುಕೊಂಡು ಕಳೆದ ಐದಾರು ದಿನಗಳಿಂದ ಬೇಟೆಯಾಡಲೂ ಆಗದಷ್ಟು ನಿತ್ರಾಣವಾಗಿದೆ. ಕೊನೆಗೆ ಚಿರತೆಯು ಆಹಾರವಿಲ್ಲದೆ ಪ್ರಾಣ ಬಿಟ್ಟಿದೆ. ಎರಡು ದಿನಗಳ ಕಾರ್ಯಾಚರಣೆ ನಡೆಸಿದರೂ ಅರಣ್ಯ ಇಲಾಖೆಗೆ ಚಿರತೆಗೆ ಗಾಯವಾಗಿರುವ ಸಣ್ಣ ಸೂಚನೆಯೂ ಗೊತ್ತಾಗಿರಲಿಲ್ಲ.