ಪರಿಹಾರ ಧನ ಪಡೆಯಲು ರೈಲು ಅಪಘಾತದಲ್ಲಿ ಪತಿ ಸಾವಿಗೀಡಾಗಿದ್ದಾನೆ ಎಂದು ಸುಳ್ಳು ಹೇಳಿದ ಮಹಿಳೆ; ಗಂಡನಿಂದಲೇ ದೂರು

ಒಡಿಶಾದ ಕಟಕ್ ಜಿಲ್ಲೆಯ ಗೀತಾಂಜಲಿ ದತ್ತಾ ತನ್ನ ಪತಿ ಬಿಜಯ್ ದತ್ತಾ ಜೂನ್ 2 ರಂದು ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲ ಮೃತದೇಹವೊಂದನ್ನು ಅದೇ ತನ್ನ ಪತಿಯ ಮೃತದೇಹ ಎಂದು ಗುರುತಿಸಿದ್ದರು

ಕಳೆದ ವಾರ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ತನ್ನ ಪತಿ ಸಾವನ್ನಪ್ಪಿದ್ದಾನೆ ಎಂದು ಹೇಳಿ ಮಹಿಳೆಯೊಬ್ಬರು ಪರಿಹಾರ ಧನ ಪಡೆಯಲು ಯತ್ನಿಸಿದ ಘಟನೆ ನಡೆದಿದೆ. ಒಡಿಶಾ ರೈಲು ಅಪಘಾತದಲ್ಲಿ ಸುಮಾರು 300 ಜನರು ಸಾವಿಗೀಡಾಗಿದ್ದರು. ರೈಲು ದುರಂತದಲ್ಲಿ ಸಾವಿಗೀಡಾದವರಿಗೆ ರೈಲ್ವೆ ಸಚಿವಾಲಯದಿಂದ ₹10 ಲಕ್ಷ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಕಚೇರಿಯಿಂದ ₹ 5 ಲಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಿಂದ ₹ 2 ಲಕ್ಷ ನೀಡಲಾಗುತ್ತದೆ. ಹಾಗಾದರೆ ಒಟ್ಟು ₹ 17 ಲಕ್ಷ ಸಿಗಬಹುದು ಎಂಬ ದುರಾಸೆಯಿಂದ ಮಹಿಳೆ ಈ ನಾಟಕವಾಡಿದ್ದಾರೆ.

ದಾಖಲೆಗಳ ಪರಿಶೀಲನೆಯ ನಂತರ ಆಕೆ ಹೇಳುತ್ತಿರುವುದು ಸುಳ್ಳು ಎಂಬುದು ಗೊತ್ತಾಗಿದೆ.ಸಾರ್ವಜನಿಕ ಹಣವನ್ನು ದೋಚಲು ಪ್ರಯತ್ನಿಸಿದ್ದಕ್ಕಾಗಿ ಮತ್ತು ತಾನು ಬದುಕಿದ್ದರೂ ಸತ್ತಿದ್ದಾನೆ ಎಂದು ಹೇಳಿದ ತನ್ನ ಹೆಂಡತಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ ಬಿಜಯ್ ದತ್ತಾ. ಮೊದಲು ದೂರು ದಾಖಲಿಸಿದ ಮಣಿಬಂಡಾ ನಿಲ್ದಾಣದ ಉಸ್ತುವಾರಿ ಪೊಲೀಸ್ ಅಧಿಕಾರಿ ರಾಜ್ಯದ ಬಾಲಸೋರ್ ಜಿಲ್ಲೆಯ ಬಹನಾಗಾದಲ್ಲಿನ ಪೊಲೀಸ್ ಠಾಣೆಗೆ ದೂರು ವರ್ಗಾಯಿಸಿದ್ದಾರೆ.