ದಾಂಡೇಲಿ : ಆತ ಬದುಕುವುದೇ ಕಷ್ಟ, ಆ ರೀತಿಯಲ್ಲಿ ತಡರಾತ್ರಿ ಅಪಘಾತವಾಗಿ ಗಂಭೀರ ಗಾಯಗೊಂಡು ರಕ್ತಸ್ರಾವವಾಗಿ ವಿಲವಿಲನೆ ಒದ್ದಾಡುತ್ತಿದ್ದ ವ್ಯಕ್ತಿಗೆ ಸರಿಯಾದ ಸಮಯಕ್ಕೆ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ ತಂಡ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ರಕ್ತಸ್ರಾವವಾಗುವುದನ್ನು ತಡೆಗಟ್ಟಿ, ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ರೆಫರ್ ಮಾಡಿದ್ದರು. ಆಗ ನೆರವಿಗೆ ಬಂದವರೇ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಸೋಮನಗೌಡ.ಸಿ.ಎಂ.
ಹೌದು, ಮೊನ್ನೆ ತಡರಾತ್ರಿ ನಗರದ ಸೋಮಾನಿ ವೃತ್ತಕ್ಕೆ ವೇಗವಾಗಿ ಬಂದ ದ್ವಿಚಕ್ರ ವಾಹನವೊಂದು ಡಿಕ್ಕಿಯಾಗಿ ವಾಹನದಲ್ಲಿದ್ದ ಸ್ಥಳೀಯ ಗಾಂಧಿನಗರದ ನಿವಾಸಿ 37 ವರ್ಷ ವಯಸ್ಸಿನ ನೌಷದ್ ಮಹಮ್ಮದ್ ಆಶಮ್ ಸವಣೂರು ಈತನ ಗಂಟಲಿಗೆ ರಾಡ್ ತಾಗಿ ಗಂಭೀರ ಗಾಯವಾಗಿತ್ತಲ್ಲದೇ, ಕಾಲಿಗೂ ಗಂಭೀರ ಗಾಯವಾಗಿತ್ತು. ತಕ್ಷಣವೇ ಸಾರ್ವಜನಿಕ ಆಸ್ಪತ್ರೆಗೆ ಕರೆ ತರಲಾಗಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು.
ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಸೋಮನಗೌಡ.ಸಿ.ಎಂ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಊಟ ಮಾಡುತ್ತಿದ್ದ ತಟ್ಟೆಯನ್ನು ಬಿಟ್ಟು ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ನೌಷದ್ನ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಿ ಕೇವಲ 50 ನಿಮಿಷದಲ್ಲಿ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿಯ ವೈದ್ಯರು ಸರಿಯಾದ ಸಮಯಕ್ಕೆ ರೋಗಿಯನ್ನು ತಂದಿದ್ದೀರಿ ಎಂದು ಆಂಬುಲೆನ್ಸ್ ಚಾಲಕ ಸೋಮನಗೌಡ.ಸಿ.ಎಂ ಅವರ ಶರವೇಗದ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂತಹ ಮಾನವೀಯ ಕಾರ್ಯಕ್ಕೆ ಸದಾ ಮುಂದಾಗುತ್ತಿರುವ ಸೋಮನಗೌಡ.ಸಿ.ಎಂ ಅವರ ಕಾರ್ಯದಕ್ಷತೆಗೆ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ ಹಾಗೂ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳು, ಸಿಬ್ಬಂದಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.