ಗೋ ಹತ್ಯೆ ನಿಷೇಧ ಬಗ್ಗೆ ಸರ್ಕಾರದಿಂದ ಸಮೀಕ್ಷೆ: ಸತೀಶ್ ಜಾರಕಿಹೊಳಿ

ಬೆಳಗಾವಿ: ಗೋ ಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸರ್ಕಾರದಿಂದ ಸಮೀಕ್ಷೆ ನಡೆಸುವುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರದ ಕುರಿತು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನೆ-ಮನೆಗಳಿಗೆ ತೆರಳಿ ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ಕುರಿತು ಸಂದರ್ಶನ ನಡೆಸುತ್ತೇವೆ. ಮನೆ ಮನೆಗೆ ಹೋಗಿ ಈ ಕಾಯ್ದೆ ಬೇಕೋ ಬೇಡವೋ ಎಂದು ಜನರನ್ನು ಕೇಳುತ್ತೇವೆ. ಬಹುಮತದ ಆಧಾರದ ಮೇಲೆ ಗೋಹತ್ಯೆ ಕಾಯ್ದೆ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಒರಿಜಿನಲ್ ಪಠ್ಯಪುಸ್ತಕವನ್ನು ಕಳೆದ ಬಾರಿ ಬಿಜೆಪಿ ತಿರುಚಿದೆ. ಬಸವೇಶ್ವರ, ಅಂಬೇಡ್ಕರ್ ಸೇರಿದಂತೆ ಬಹಳಷ್ಟು ಇತಿಹಾಸ ತಿರುಚಲಾಗಿದೆ. ಪಠ್ಯ ಪುಸ್ತಕ ಬದಲಾವಣೆ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಪ್ರಣಾಳಿಕೆ ಪ್ರಕಾರ ಪಠ್ಯ ಪುಸ್ತಕ ಬದಲಾವಣೆ ಮಾಡೇ ಮಾಡುತ್ತೇವೆ. ನುರಿತ ತಜ್ಞರ ಸಮಿತಿ ರಚಿಸಿ ಪಠ್ಯ ಬದಲಾವಣೆ ಮಾಡುತ್ತೇವೆ. ಕಳೆದ ಬಾರಿ ನಡೆದ ಲೋಕೋಪಯೋಗಿ ಇಲಾಖೆ ಅಕ್ರಮದ ಬಗ್ಗೆ ಸಮಯ ತೆಗೆದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು.