ಅಂಕೋಲಾ: ತಾಲೂಕಿನ ವಿವಿಧೆಡೆ ಸೋಮವಾರ ಸಂಜೆ ಬಿರುಸಿನ ಮಳೆ ಸುರಿಯಿತು. ಬಿಸಿಲಿನ ಧಗೆಯಿಂದ ಕಂಗೆಟ್ಟ ಜನರು ಒಂದೆಡೆ ತಂಪು ಸಿಂಚನದ ಸವಿ ಅನುಭವಿಸಿದರೆ, ಮುಂಗಾರು ಮಳೆಯ ಆಗಮನಕ್ಕೆ ಕಾದು ನೋಡುತ್ತಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಯಾಂತ್ರಿಕ ಮೀನುಗಾರಿಕೆಗೆ ಸರ್ಕಾರ ತಾತ್ಕಾಲಿಕ ನಿಷೇಧ ಹೇರಿದ ಪರಿಣಾಮ ಮೀನುಗಾರರು ಗಂಗಾವಳಿ ನದಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮುಂಗಾರು ಮಳೆಯ ನಂತರ ಗಂಗಾವಳಿ ನದಿಯಲ್ಲಿ ಮತ್ಸ್ಯ ಬೇಟೆ ಚುರುಕಾಗುತ್ತದೆ.
2019 ರಿಂದ 2021ರವರೆಗೆ ಸತತ ಮೂರು ವರ್ಷಗಳ ಕಾಲ ನಿರಂತರ ನೆರೆಯಿಂದಾಗಿ ತಾಲೂಕಿನ ಜನರು ಕಂಗೆಟ್ಟಿದ್ದರು. ಕಳೆದ ಬಾರಿ ಮಳೆಗಾಲದಲ್ಲಿ ಗಂಗಾವಳಿ ನದಿಯ ಅಬ್ಬರ ತುಸು ಕಡಿಮೆ ಇದ್ದು ಹೆಚ್ಚಿನ ಹಾನಿ ಸಂಭವಿಸಿಲ್ಲ. ಅಂದಿನ ಶಾಸಕಿ ರೂಪಾಲಿ ನಾಯ್ಕ ಅವರು ನೆರೆ ನಿರ್ವಹಣೆ ಕುರಿತು ಮುತುವರ್ಜಿ ವಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದಾಗ್ಯೂ ಈ ಬಾರಿ ಉತ್ತಮ ಮಳೆ ಆಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಜನರು ಆತಂಕದಲ್ಲಿದ್ದಾರೆ.