‘ಪಾಕಿಸ್ತಾನ ನಂಬಲರ್ಹವಲ್ಲ, ಶಸ್ತ್ರಾಸ್ತ್ರ ನೀಡುವ ತಪ್ಪು ಮಾಡಬೇಡಿ’ ಅಮೆರಿಕಕ್ಕೆ ರಕ್ಷಣಾ ಸಚಿವ ರಾಜನಾಥ್ ಎಚ್ಚರಿಕೆ

ಪ್ರಾದೇಶಿಕ ಅಸ್ಥಿರತೆಗೆ ಕಾರಣವಾಗುವ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವುದರಿಂದ ಶಸ್ತ್ರಾಸ್ತ್ರಗಳ ವಿಷಯದಲ್ಲಿ ಪಾಕಿಸ್ತಾನವನ್ನು ನಂಬಲು ಸಾಧ್ಯವಿಲ್ಲ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಸ್ಟಿನ್‌ಗೆ ತಿಳಿಸಿದ್ದಾರೆ..

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಈ ವೇಳೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲಾಯ್ಡ್‌ ಅವರ ಬಳಿ ಪಾಕಿಸ್ತಾನದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಯಾರಿಂದಲೂ ಮರೆಮಾಡಲಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಸ್ತ್ರಾಸ್ತ್ರ ವಿಚಾರದಲ್ಲಿ ಪಾಕಿಸ್ತಾನವನ್ನು ನಂಬಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ…
ಜೂನ್ 21 ರಿಂದ 24 ರವರೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡುವ ಮುನ್ನವೇ, ಅಮೆರಿಕ ರಕ್ಷಣಾ ಕಾರ್ಯದರ್ಶಿ ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ. ಇನ್ನು ಈ ಸಭೆಗೂ ಮೊದಲು, ಯುಎಸ್ ರಕ್ಷಣಾ ಸಚಿವ ಆಸ್ಟಿನ್ ಅವರಿಗೆ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ತ್ರಿ ಸೇವಾ ಗಾರ್ಡ್ ಆಫ್ ಆನರ್ ನೀಡಲಾಯಿತು. ಈ ವೇಳೆ ಇಂಡೋ ಪೆಸಿಫಿಕ್ ಸೇರಿದಂತೆ ಪ್ರಾದೇಶಿಕ ಭದ್ರತೆ ವಿಚಾರವಾಗಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಭಾರತದ ನೆರೆ ರಾಷ್ಟ್ರಗಳ ಬಗ್ಗೆಯೂ ಚರ್ಚೆ ನಡೆಯಿತು. ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳೊಂದಿಗೆ ಪಾಕಿಸ್ತಾನವನ್ನು ನಂಬಬೇಡಿ ಎಂದು ಭಾರತವು ಅಮೆರಿಕಕ್ಕೆ ಹೇಳಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.