ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆಯಲ್ಲಿ ಬಿಜೆಪಿಗೆ ಠಕ್ಕರ್ ನೀಡಲು ಹೊಸ ರಣತಂತ್ರ ಹೆಣೆಯಲು ಕಾಂಗ್ರೆಸ್ ಮುಂದಾಗಿದೆ. ವಾರ್ಡ್ಗಳ ಸಂಖ್ಯೆಯನ್ನು 250 ಕ್ಕೇರಿಸಲು ಕಾಂಗ್ರೆಸ್ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ. ಬಿಜೆಪಿ ಆಡಳಿತದಲ್ಲಿದ್ದಾಗ ಪಾಲಿಕೆಯ ವಾರ್ಡ್ಗಳನ್ನು ಅನಕ್ಕೂಲಕ್ಕೆ ತಕ್ಕಂತೆ ವಿಗಂಡಿಸಿ, 198 ವಾರ್ಡ್ಗಳನ್ನು 243 ಕ್ಕೇ ಏರಿಸಿತ್ತು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬರ್ತಿದ್ದಂತೆ ಮರು ವಿಗಂಡನೆಗೆ ಯೋಜನೆ ರೂಪಿಸಿದೆ ಎನ್ನಲಾಗಿದೆ.
ಬಿಜೆಪಿ ವಿಗಂಡಿಸಿದ್ದ 243 ವಾರ್ಡ್ಗಳನ್ನ 250 ಕ್ಕೆ ಹೆಚ್ಚಿಸಲು ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದೆ. ವಾರ್ಡ್ಗಳನ್ನು ಹೆಚ್ಚಿಸುವ ಬಗ್ಗೆ ಬೆಂಗಳೂರಿನ ಸಚಿವರು, ಶಾಸಕರು ಹಾಗೂ ಹಿರಿಯ ಮಾಜಿ ಮೇಯರ್ಗಳು ಸಲಹೆ ನೀಡಿದ್ದಾರೆ. ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದ ಸಮಿತಿ ಮುಂದೆ ಕೈ ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ವಾರ್ಡ್ಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲು ಸರ್ಕಾರ ಮುಂದಾಗಿದೆ.
ಸರ್ಕಾರ ರಚನೆ ಬೆನ್ನಲ್ಲೆ ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗುತ್ತಿದ್ದು, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯ ಲಾಭ ಪಡೆಯುವುದಕ್ಕೆ ತುರ್ತಾಗಿ ಚುನಾವಣೆ ನಡೆಸಲು ಪಕ್ಷವು ಆತುರ ತೋರುತ್ತಿದೆ. ಡಿ ಲಿಮಿಟೇಷನ್ ನಡೆಸಿ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಂಡಿದ್ದ ಬಿಜೆಪಿಗೆ ಅದೇ ತಂತ್ರ ಅನುಸರಿಸಿ ತಿರುಗೇಟು ನೀಡುವುದು ಕಾಂಗ್ರೆಸ್ ಪ್ರತಿತಂತ್ರ ಎನ್ನಲಾಗಿದೆ. ಇದರಿಂದ 198 ವಾರ್ಡ್ಗಳನ್ನು 243ಕ್ಕೆ ವಿಗಂಡಿಸಿ ಚುನಾವಣೆ ಗೆಲ್ಲುವ ಲೆಕ್ಕ ಹಾಕಿಕೊಂಡಿದ್ದ ಬಿಜೆಪಿ ಆಘಾತ ಎದುರಾಗಲಿದೆ.
ಬಿಬಿಎಂಪಿ ಕಾರ್ಪೊರೇಟರ್ಗಳ ಅಧಿಕಾರವಧಿ ಮುಗಿದು ಎರಡು ವರ್ಷಗಳೇ ಕಳೆದಿದ್ದರೂ ಹಿಂದಿನ ಬಿಜೆಪಿ ಸರ್ಕಾರ ಒಂದಲ್ಲ ಒಂದು ನೆಪವೊಡ್ಡಿ ಬಿಬಿಎಂಪಿ ಚುನಾವಣೆಯನ್ನೂ ಮುಂದೂಡುತ್ತಾ ಬಂದಿತ್ತು. ವಾರ್ಡ್ ವಿಂಗಡಣೆ ನೆಪ ನೀಡಿ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಿರಲಿಲ್ಲ. ಚುನಾವಣೆ ನಡೆಸಿ ಅಂತ ಹೈಕೋರ್ಟ್ ಅದೇಶ ನೀಡಿದ್ದರೂ, ಮತ್ತೆ ಮೀಸಲಾತಿ ಹೆಸರಲ್ಲಿ 6 ತಿಂಗಳ ಗಡುವು ಕೇಳಿತ್ತು.