ದೆಹಲಿ: 1991ರ ಅವಧೇಶ್ ರಾಯ್ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್ಸ್ಟರ್ ,ರಾಜಕಾರಣಿ ಮುಖ್ತಾರ್ ಅನ್ಸಾರಿಗೆ ವಾರಣಾಸಿಯ ವಿಶೇಷ ಎಂಪಿ/ಎಂಎಲ್ಎ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇಂದು ಬೆಳಗ್ಗೆ ನ್ಯಾಯಾಲಯ ಪ್ರಸ್ತುತ ಕೊಲೆ ಪ್ರಕರಣದಲ್ಲಿ ಅನ್ಸಾರಿ ದೋಷಿ ಎಂದು ತೀರ್ಪು ನೀಡಿತ್ತು. ಆಗಸ್ಟ್ 3, 1991 ರಂದು, ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಶಾಸಕ ಅಜಯ್ ರಾಯ್ ಅವರ ಸಹೋದರ ಅವಧೇಶ್ ರಾಯ್ನ್ನು ವಾರಣಾಸಿಯಲ್ಲಿ ಅಜಯ್ ರಾಯ್ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಿಲಾಗಿತ್ತು. ಈ ಪ್ರಕರಣದಲ್ಲಿ ಅಜಯ್ ರಾಯ್ ಅವರು ಮುಖ್ತಾರ್ ಅನ್ಸಾರಿ, ಭೀಮ್ ಸಿಂಗ್ ಮತ್ತು ಮಾಜಿ ಶಾಸಕ ಅಬ್ದುಲ್ ಕಲೀಂನ್ನು ಎಫ್‌ಐಆರ್‌ನಲ್ಲಿ ಹೆಸರಿಸಿದ್ದರು.
32 ವರ್ಷಗಳಷ್ಟು ಹಳೆಯದಾದ ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶದ ವಾರಣಾಸಿಯ ನ್ಯಾಯಾಲಯವು ಜೈಲಿನಲ್ಲಿರುವ ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ ಮತ್ತು ₹ 1,00,000 ದಂಡ ವಿಧಿಸಿದೆ. ಅವಧೇಶ್ ಕೊಲೆ ನಡೆದಾಗ ಮುಖ್ತಾರ್ ಅನ್ಸಾರಿ ಶಾಸಕರಾಗಿರಲಿಲ್ಲ. ತೀರ್ಪು ಪ್ರಕಟವಾಗುವ ಮುನ್ನ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು.
ಅನ್ಸಾರಿ ವಿರುದ್ಧದ 61 ಕ್ರಿಮಿನಲ್ ಪ್ರಕರಣಗಳಲ್ಲಿ ಇದು ಐದನೇ ಶಿಕ್ಷೆಯಾಗಿದೆ. ಈತನ ವಿರುದ್ಧ ರಾಜ್ಯದ ವಿವಿಧೆಡೆ ಇನ್ನೂ 20 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಐದು ಬಾರಿ ಶಾಸಕರಾಗಿರುವ ಮುಖ್ತಾರ್ ಅನ್ಸಾರಿಗೆ ಈ ಏಪ್ರಿಲ್‌ನಲ್ಲಿ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿ ತು.
ವಾರಣಾಸಿ ಎಂಪಿ ಎಂಎಲ್ಎ ನ್ಯಾಯಾಲಯವು ಮೇ 19 ರಂದು ಅಂತಿಮ ವಾದಗಳ ನಂತರ ಅವಧೇಶ್ ರಾಯ್ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿತು. ಆದೇಶವನ್ನು ಕಾಯ್ದಿರಿಸಿದ ಕೋರ್ಟ್ ಜೂನ್ 5 ರಂದು ದಿನಾಂಕವನ್ನು ನಿಗದಿಪಡಿಸಿತು.
1996, 2002, 2007, 2012 ಮತ್ತು 2017ರಲ್ಲಿ ಮುಖ್ತಾರ್ ಅನ್ಸಾರಿ ಅವರು ಐದು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಜೈಲಿನಿದ್ದಾಗಲೇ ಅನ್ಸಾರಿ ಮೂರು ಬಾರಿ ಗೆದ್ದಿದ್ದಾರೆ. ಮುಖ್ತಾರ್ ಪುತ್ರ ಅಬ್ಬಾಸ್ ಅನ್ಸಾರಿ 2022 ರಲ್ಲಿ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದಿಂದ ಸ್ಪರ್ಧಿಸಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಭದ್ರಕೋಟೆಯಾದ ಮೌ ಸದರ್‌ನಿಂದ ಗೆದ್ದಿದ್ದರು.