ಬೆಂಗಳೂರು: 21 ವರ್ಷದ ಮೃತ ಮಹಿಳೆಯ ದೇಹದ ಮೇಲೆ ಲೈಂಗಿಕ ದೌರ್ಜ್ಯನ್ಯವೆಸಗಿದ್ದಆರೋಪಿಗೆ ಶಿಕ್ಷೆ ವಿಧಿಸಲು ಸೂಕ್ತ ಸೆಕ್ಷನ್ ಇಲ್ಲವೆಂದು ಕಾರಣ ನೀಡಿ ಕರ್ನಾಟಕ ಹೈಕೋರ್ಟ್ ಖುಲಾಸೆಗೊಳಿಸಿದೆ. ನ್ಯಾಯಮೂರ್ತಿ ಬಿ ವೀರಪ್ಪ ಹಾಗೂ ವೆಂಕಟೇಶ್ ನಾಯಕ್ ಟಿ ಅವರಿದ್ದ ವಿಭಾಗೀಯ ಪೀಠ, ನೆಕ್ರೋಫಿಲಿಯಾ (ಮೃತದೇಹಗಳ ಮೇಲಿನ ಅತ್ಯಾಚಾರ) ಹಾಗೂ ವಿಕೃತಿಗೆ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕಾನೂನಿನ ತಿದ್ದುಪಡಿ ತರಬೇಕು. ಅಲ್ಲದೇ ಅತ್ಯಾಚಾರಕ್ಕೆ ಸಂಬಂಧಿಸಿದ ಐಪಿಸಿ (IPC) ಸೆಕ್ಷನ್‌ಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ನೆಕ್ರೋಫಿಲಿಯಾ ಎಂದರೇನು?
ನೆಕ್ರೋಫಿಲಿಯಾ ಎಂಬುದು ಅಪರೂಪದ ಮತ್ತು ಲೈಂಗಿಕ ಆಕರ್ಷಣೆ ಅಥವಾ ಮೃತ ದೇಹಗಳ ಕಡೆಗೆ ಆಕರ್ಷಣೆಯನ್ನು ವಿವರಿಸಲು ಬಳಸುವ ಪದವಾಗಿದೆ. ಇದು ಶವಗಳೊಂದಿಗೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವ್ಯಕ್ತಿಯ ಬಯಕೆಯನ್ನು ಸೂಚಿಸುತ್ತದೆ. ಅನೇಕ ರಾಷ್ಟ್ರಗಳಲ್ಲಿ ಇದಕ್ಕೆ ನಿಷೇಧ, ನೈತಿಕವಾಗಿ ಖಂಡನೀಯ ಮತ್ತು ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ.
“ನೆಕ್ರೋಫಿಲಿಯಾ” ಎಂಬ ಪದವು ಗ್ರೀಕ್ ಭಾಷೆಯಿಂದ ಬಂದಿದೆ. ಗ್ರೀಕ್ನ “ನೆಕ್ರೋ” ಸತ್ತ ಅಥವಾ ಸಾವು ಎಂಬ ಅರ್ಥವನ್ನು ನೀಡುತ್ತದೆ. “ಫಿಲಿಯಾ” ಎಂದರೆ ಪ್ರೀತಿ ಅಥವಾ ಆಕರ್ಷಣೆ ಎಂಬ ಅರ್ಥವನ್ನು ನೀಡುತ್ತದೆ. ನೆಕ್ರೋಫಿಲಿಯಾ ಎಂದರೇ ಸತ್ತವರ ಕಡೆಗೆ ಪ್ರೀತಿ ಅಥವಾ ಆಕರ್ಷಣೆ ಹೊಂದುವುದು. ಲೀಗಲ್ ಸರ್ವಿಸಸ್ ಇಂಡಿಯಾದ ವರದಿ ಪ್ರಕಾರ ಸತ್ತವರ ಜೊತೆ ನೆಕ್ರೋಫಿಲಿಯಾಕ್ ಆತ್ಮೀಯತೆ ಅಥವಾ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವುದು. ನೆಕ್ರೋಫಿಲಿಯಾವನ್ನು ವ್ಯಕ್ತಿಯು ತನ್ನ ವಿವೇಚೆನಯಿಂದಲೇ ಮತ್ತು ಸ್ವಇಚ್ಛೆಯಿಂದ ಮಾಡುತ್ತಾನೆ ಎಂದು ಹೇಳಿದೆ.
ನೆಕ್ರೋಫಿಲಿಯಾ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಶವಾಗಾರಗಳಲ್ಲಿ ದೇಹಗಳ ಕಾವಲಿಗೆ ನಿಯೋಜಿತವಾಗಿರುವ ಅಟೆಂಡರ್‌ಗಳು ದೇಹಗಳೊಂದಿಗೆ “ಲೈಂಗಿಕ ಸಂಭೋಗ” ದಲ್ಲಿ ತೊಡಗುತ್ತಾರೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಐಪಿಸಿ ಸೆಕ್ಷನ್ 377ಗೆ ತಿದ್ದುಪಡಿ ತಂದು ಅದರಲ್ಲಿ ಮೃತದೇಹದ ಮೇಲಿನ ಅತ್ಯಾಚಾರ ಹಾಗೂ ವಿಕೃತಿಯನ್ನು ಕೂಡ ಸೇರಿಸಬೇಕು. ನೆಕ್ರೋಫಿಲಿಯಾ ಅಥವಾ ಸ್ಯಾಡಿಸಂ ಎಂಬ ಪ್ರತ್ಯೇಕ ನಿಬಂಧನೆಯನ್ನು ಪರಿಚಯಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಯುನೈಟೆಡ್ ಕಿಂಗ್ಡಂ, ಕೆನಡಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳು ನೆಕ್ರೋಫಿಲಿಯಾವನ್ನು ಅಪರಾಧವೆಂದು ಪರಿಗಣಿಸುವ ನಿರ್ದಿಷ್ಟ ಕಾನೂನುಗಳನ್ನು ಹೊಂದಿವೆ ಎಂದು ನ್ಯಾಯಾಲಯವು ತಿಳಿಸಿದೆ. ಆದಾಗ್ಯೂ, ಭಾರತದಲ್ಲಿ, ಮೃತ ಮಹಿಳೆಯರ ದೇಹಗಳ ಘನತೆ ಮತ್ತು ಹಕ್ಕುಗಳ ವಿರುದ್ಧದ ಅಪರಾಧಗಳನ್ನು ಪರಿಹರಿಸಲು ಮತ್ತು ತಡೆಗಟ್ಟಲು ಐಪಿಸಿ ಸೇರಿದಂತೆ ಯಾವುದೇ ಮೀಸಲಾದ ಶಾಸನವಿಲ್ಲ. ಮೃತರ ಘನತೆ ಕಾಪಾಡಲು ಕಾನೂನು ಕ್ರಮಗಳ ಅಗತ್ಯವನ್ನು ನ್ಯಾಯಾಲಯ ಒತ್ತಿ ಹೇಳಿದೆ.
ರಾಜ್ಯ ಸರ್ಕಾರಕ್ಕೂ ಖಡಕ್ ಸೂಚನೆ
ಶವಾಗಾರಗಳಲ್ಲಿ ವಿಶೇಷವಾಗಿ ಮಹಿಳೆಯರ ಶವಗಳ ಭದ್ರತೆ ಮತ್ತು ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ಆರು ತಿಂಗಳ ಒಳಗಾಗಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಶವಾಗಾರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಹೆಚ್ಚುವರಿಯಾಗಿ, ಶವಾಗಾರಗಳನ್ನು ನಿಯಮಿತವಾಗಿ ಶುಚಿತ್ವ ಕಾಪಾಡಬೇಕೆಂದು ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಇದಲ್ಲದೆ, ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡದ ಮಾರ್ಗಸೂಚಿಗಳ ಪ್ರಕಾರ ಜಿಲ್ಲಾ ಆಸ್ಪತ್ರೆಗಳಿಗಳ ಶವಾಗಾರಗಳಲ್ಲಿ ಮೂಲಭೂತ ಮೂಲಸೌಕರ್ಯಗಳನ್ನು ಒದಗಿಸಬೇಕು.
ಐಪಿಸಿ ಸೆಕ್ಷನ್ 377ರ ಅಡಿಯಲ್ಲಿ ಅ ಸ್ವಾಭಾವಿಕ ಅಪರಾಧಗಳನ್ನು ವ್ಯಾಖ್ಯಾನಿಸಿದ್ದರೂ, ಮೃತದೇಹ ಎಂಬ ಪದವನ್ನು ಆ ಸೆಕ್ಷನ್ ಒಳಗೊಂಡಿಲ್ಲ. ಈ ಹಿನ್ನೆಲೆ ಆಸ್ಪತ್ರೆಯ ಶವಾಗಾರಗಳು ಸೇರಿ ಮಹಿಳೆಯರ ಮೃತದೇಹದ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ.