ಧಾರವಾಡ: ಜಿಲ್ಲೆಯ ಕಲಘಟಗಿಯಲ್ಲಿ ಹಸೆಮಣೆ ಏರಬೇಕಿದ್ದ ನಿಂಗಪ್ಪ ನವಲೂರ ಎನ್ನುವ ಯುವಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಜೂನ್ 7ರಂದು ಮದುವೆಯಾಗಬೇಕಿದ್ದ ಯುವಕನ ಹತ್ಯೆ ಪ್ರಕರಣವನ್ನು ಕಲಘಟಗಿ ಪೊಲೀಸರು ಘಟನೆ ನಡೆದ 48 ಗಂಟೆಗಳಲ್ಲಿ ಭೇದಿಸಿದ್ದಾರೆ. ವಿವಾಹಿತಳ ಜೊತೆ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದು ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಗಪ್ಪ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಪತಿ ಹಾಗೂ ಆತನ ಸಹೋದರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿನ್ನೂರು ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಷಯ ಮಹಿಳೆಯ ಪತಿ ಮುತ್ತಪ್ಪ ಹುಲ್ಲೊಳ್ಳಿಗೆ ತಿಳಿದಿದ್ದು, ಬಳಿಕ ಮುತ್ತಪ್ಪ ತನ್ನ ಸಹೋದರ ವೀರಭದ್ರ ಜಾಲಿಹಾಳ ಜೊತೆ ಸೇರಿಕೊಂಡು ನಿಂಗಪ್ಪನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಇಬ್ಬರನ್ನು ಇನ್ಸ್‌ಪೆಕ್ಟರ್ ಶ್ರೀಶೈಲ ಕೌಜಲಗಿ ನೇತೃತ್ವದ ತಂಡ ವಿಚಾರಣೆಗೊಳಪಡಿಸಿದೆ.
ನಿಂಗಪ್ಪನಿಗೆ ಇದೇ ಜೂನ್ 7ರಂದು ತಾವರಗೇರೆ ಗ್ರಾಮದ ಯುವತಿ ಜೊತೆ ಮದುವೆ ನಿಶ್ಚಯವಾಗಿತ್ತು. ಆದ್ರೆ, ಮದುವೆ ಐದು ದಿನಗಳ ಮುಂಚೆ ಅಂದರೆ ಜೂನ್ 2ರಂದು ನಿಂಗಪ್ಪ ತೋಟದ ಮನೆಯಲ್ಲಿ ಕೊಲೆಯಾಗಿದ್ದ. ಕಲಘಟಗಿ ತಾಲೂಕಿನ ಜಿನ್ನೂರು ಗ್ರಾಮದ ತೋಟದ ಮನೆಯಲ್ಲಿ ಮಧ್ಯರಾತ್ರಿ ನಿಂಗಪ್ಪನ ಕಣ್ಣಿಗೆ ಖಾರದ ಪುಡಿ ಎರಚಿ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಇನ್ನೇನು ಐದೇ ದಿನದಲ್ಲಿ ಮದುವೆಯಾಗಿ ಹೊಸ ಜೀವನ ಆರಂಭಿಸಬೇಕಿದ್ದ ನಿಂಗಪ್ಪ ಮಸಣ ಸೇರಿದ್ದ. ಇದರಿಂದ ಮದುವೆ ಮನೆಯಲ್ಲಿ ನೀರವ ಮೌನ ಆವರಿಸಿತ್ತು.
ವಿಷಯ ತಿಳಿದು ಸ್ಥಳಕ್ಕೆ ಕಲಘಟಗಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಪೊಲೀಸರು ಕೊಲೆಯಾದ ಎರಡೇ ದಿನದಲ್ಲಿ ಪ್ರಕರಣವನ್ನು ಭೇದಿಸಿದ್ದು, ಹತ್ಯೆಗೆ ಅನೈತಿಕ ಸಂಬಂಧವೇ ಕಾರಣ ಎಂದು ತಿಳಿದುಬಂದಿದೆ. ಅಲ್ಲದೇ ಕೊಲೆ ಆರೋಪಿಗಳಾದ ಮಹಿಳೆಯ ಗಂಡ ಮುತ್ತಪ್ಪ ಹಾಗೂ ಆತನ ಸಹೋದರ ವೀರಭದ್ರ ಜಾಲಿಹಾಳ ಎನ್ನುವಾತನನ್ನು ಪೊಲೀಸರು ಬಂಧಿಸಿದ್ದಾರೆ.