ಬಿಸಿಲಿನ ಬೇಗೆಗೆ ಕಂಗಾಲಾದ ಕರಾವಳಿ ಜನ- ಉ.ಕ ಜಿಲ್ಲೆಯ 150 ಗ್ರಾಮಗಳಲ್ಲಿ ನೀರಿನ ಅಭಾವ

ಕಾರವಾರ: ಕರಾವಳಿ ಜಿಲ್ಲೆಯಲ್ಲೀಗ ಸಿಲಿನ ಅಬ್ಬರ ಜೋರಾಗಿದ್ದು, ಜನ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ರೂ ಕರಾವಳಿಗೆ ಮಾತ್ರ ಇನ್ನೂ ವರುಣನ ಕೃಪೆಯಾಗಿಲ್ಲ. ಹೀಗಾಗಿ ಇರುವ ಜಲಮೂಲಗಳೆಲ್ಲ ಬತ್ತಿಹೋಗಿ ಜನ ಹನಿ ನೀರಿಗಾಗಿ ಕಿಲೋಮೀಟರ್ ಗಟ್ಟಲೇ ತೆರಳಬೇಕಾಗಿದೆ. ಇರುವ ಬಾವಿಗಳಲ್ಲಿ ಉಪ್ಪು ನೀರು ಬರುತ್ತಿದ್ದು, ಬಳಕೆಗೆ ಬಾರದಂತಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವಾಗ ಮಳೆಯಾಗುತ್ತೋ ಎಂದು ಜನ ಕಾದುಕೂರುವಂತಾಗಿದೆ.

ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲಿ ಬಿಸಿಲಿನ ತಾಪದ ಏರಿಕೆಯೊಂದಿಗೆ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುತ್ತಿದೆ. ಈಗಾಗಲೇ ಉತ್ತರ ಕನ್ನಡದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬೇಸಿಗೆ ಅಬ್ಬರಕ್ಕೆ ಜಲಮೂಲಗಳು ಬತ್ತಿಹೋಗುತ್ತಿವೆ. ಜನರು ಕುಡಿಯುವ ನೀರಿಗಾಗಿ ಕೊಡ ಹಿಡಿದು ಕಿಲೋ ಮೀಟರ್‍ಗಟ್ಟಲೇ ನಡೆದುಹೋಗುವಂತಾಗಿದೆ. ಕೆರೆ, ಕಟ್ಟೆಗಳು ನೀರಿಲ್ಲದೇ ಬರಿದಾಗಿದ್ದು ಬಾವಿಗಳಲ್ಲಿ ನೀರಿದ್ದರೂ ಸಹ ಕರಾವಳಿಯಲ್ಲಿ ಉಪ್ಪು ನೀರಿನ ಸಮಸ್ಯೆ ತಲೆದೂರಿದೆ. ಪರಿಣಾಮ ಬಾವಿಗಳಲ್ಲಿ ನೀರಿದ್ದರೂ ಕುಡಿಯಲು ಯೋಗ್ಯವಾಗಿಲ್ಲ. ಜೊತೆಗೆ ಬಳಕೆಗೂ ಬಾರದಂತಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ಸೇರಿದಂತೆ ಘಟ್ಟದ ಮೇಲಿನ ತಾಲೂಕುಗಳಲ್ಲೂ ಸಹ ನೀರಿಗಾಗಿ ಹಾಹಾಕಾರ ಶುರುವಾಗಿದೆ. ರಾಜ್ಯಕ್ಕೆ ಹೋಲಿಸಿದರೆ ಈ ಬಾರಿ ಉತ್ತರಕನ್ನಡ ಜಿಲ್ಲೆಯಲ್ಲಿ 64% ಕಡಿಮೆ ಮಳೆಯಾಗಿರುವುದರಿಂದ ನೀರಿನ ಮೂಲಗಳು ಅವಧಿಗೆ ಮುನ್ನವೇ ಬತ್ತಿ ಹೋಗುವಂತಾಗಿದೆ. ಹಲವು ಗ್ರಾಮಗಳಲ್ಲಿ ಪಂಚಾಯಿತಿ ವತಿಯಿಂದ ಈಗಾಗಲೇ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತಿದ್ದು, ಜಿಲ್ಲೆಯಾದ್ಯಂತ 150ಕ್ಕೂ ಅಧಿಕ ಗ್ರಾಮ ಪಂಚಾಯತ್‍ಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ದಿನಬಿಟ್ಟು ದಿನ ನೀರಿನ ಪೂರೈಕೆಗೆ ಸೂಚನೆ ನೀಡಿದ್ದು, ಯಾವುದೇ ಗ್ರಾಮದಲ್ಲಿ ನೀರಿನ ತೊಂದರೆಯಿದ್ದಲ್ಲಿ ಅಧಿಕಾರಿಗಳ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಮುಂಗಾರು ಪೂರ್ವ ಮಳೆಯ ಕೊರತೆಯಿಂದ ಉತ್ತರಕನ್ನಡ ಜನತೆ ನೀರಿನ ಸಮಸ್ಯೆ ಎದುರಿಸುವಂತಾಗಿದ್ದು, ಯಾವಾಗ ಮಳೆ ಬರುತ್ತೆ ಎಂದು ಜನರು ಕಾದು ಕೂರುವಂತಾಗಿದೆ. ಮಳೆ ಬೀಳದಿದ್ದರೇ ಮತ್ತಷ್ಟು ಸಮಸ್ಯೆ ಜನ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ