ಶವಗಳನ್ನೂ ಬಿಡುತ್ತಿಲ್ಲ ಕಾಮುಕರು! ಮೃತದೇಹದ ಮೇಲೆ ಅತ್ಯಾಚಾರ ತಡೆಗೆ ಕಾನೂನು ರೂಪಿಸಲು ಕರ್ನಾಟಕ ಹೈಕೋರ್ಟ್ ಶಿಫಾರಸು

ಬೆಂಗಳೂರು: ಮೃತದೇಹಗಳ ಮೇಲಿನ ಅತ್ಯಾಚಾರ ಹಾಗೂ ವಿಕೃತಿಗೆ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಅತ್ಯಾಚಾರ ತಡೆ ಕಾನೂನಿಗೆ ತಿದ್ದುಪಡಿ ಅಗತ್ಯ ಎಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಬುಧವಾರ ಅಭಿಪ್ರಾಯಪಟ್ಟಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸನ್ನೂ ಮಾಡಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ (IPC Section 377) ವ್ಯಾಪ್ತಿಗೆ ಮೃತದೇಹದ ಮೇಲಿನ ಅತ್ಯಾಚಾರವೂ ಸೇರಬೇಕು. ಈ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ಮಾಡಬೇಕು ಎಂದು ನ್ಯಾಯಮೂರ್ತಿ ಬಿ ವೀರಪ್ಪ ಹಾಗೂ ವೆಂಕಟೇಶ ನಾಯಕ್ ಟಿ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಇಂಗ್ಲೆಂಡ್, ಕೆನಡಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾಗಳಲ್ಲಿ ಮೃತದೇಹಗಳ ಮೇಲಿನ ವಿಕೃತಿಗೆ ಶಿಕ್ಷೆಯಿದೆ. ಜೀವನದ ಹಕ್ಕಿನಲ್ಲಿ ಮೃತ ದೇಹದ ಘನತೆಯ ಹಕ್ಕೂ ಸೇರಿದೆ. ಹೀಗಾಗಿ 6 ತಿಂಗಳಲ್ಲಿ ಐಪಿಸಿ ಕಾಯ್ದೆ ತಿದ್ದುಪಡಿ ಮಾಡಬೇಕು ಎಂದು ಪೀಠವು ಶಿಫಾರಸು ಮಾಡಿದೆ.
ಏನಿದು ಮೃತದೇಹದ ಮೇಲಿನ ಅತ್ಯಾಚಾರ ಪ್ರಕರಣ?
ತುಮಕೂರಿನ ಯುವತಿಯೊಬ್ಬಳ ಕೊಲೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಪೀಠ, ಮೃತದೇಹದ ಮೇಲಿನ ಅತ್ಯಾಚಾರಕ್ಕೆ ಶಿಕ್ಷೆ ನೀಡಲು ಸದ್ಯಕ್ಕೆ ಕಾನೂನಿಲ್ಲದ ಕಾರಣ ಕೊಲೆ ಅಪರಾಧಕ್ಕೆ ಮಾತ್ರ ಜೀವಾವಧಿ ಶಿಕ್ಷೆ ವಿಧಿಸಿದೆ. ತುಮಕೂರಿನ ರಂಗರಾಜು ಅಲಿಯಾಸ್ ವಾಜಪೇಯಿ ಎಂಬಾತನಿಗೆ ಶಿಕ್ಷೆ ವಿಧಿಸಲಾಗಿದೆ.

ಆಸ್ಪತ್ರೆಗಳ ಶವಾಗಾರಗಳಲ್ಲಿ ಮೃತ ದೇಹದ ಮೇಲೆ ಅತ್ಯಾಚಾರದ ಘಟನೆಗಳು ನಡೆದಿವೆ. ಇಂಥ ಕೃತ್ಯಗಳ ತಡೆಗಾಗಿ ಶವಾಗಾರಗಳಲ್ಲಿ ಸಿಸಿಟಿವಿ ಅಳವಡಿಸಬೇಕು. 6 ತಿಂಗಳಲ್ಲಿ ಆಸ್ಪತ್ರೆಗಳ ಶವಾಗಾರಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದೂ ನ್ಯಾಯಪೀಠ ಶಿಫಾರಸು ಮಾಡಿದೆ. ಜತೆಗೆ ಶವಾಗಾರಗಳಲ್ಲಿ ಶುಚಿತ್ವ ಕಾಪಾಡಲೂ ನಿರ್ದೇಶನ ನೀಡಿದೆ