ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಳರೋಗಿ ಆಸ್ಪತ್ರೆ ಆವರಣದಲ್ಲಿ ಸಾವು

ಶಿವಮೊಗ್ಗ: ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆ(District Hospital)ಯಲ್ಲಿ ನಡೆದ ಒಂದು ಘಟನೆ ಸದ್ಯ ಎಲ್ಲ ರೋಗಿ, ರೋಗಿಗಳ ಸಂಬಂಧಿಕರನ್ನು ಬೆಚ್ಚಿ ಬೀಳಿಸಿದೆ. ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯು ಮೃತಪಟ್ಟಿದ್ದಾನೆ. ಆಸ್ಪತ್ರೆ ಒಳಗೆ ಮೃತಪಟ್ಟಿದ್ದರೆ ಯಾರಿಗೂ ಅಚ್ಚರಿ ಆಗುತ್ತಿರಲಿಲ್ಲ. ಹೌದು ಇಲ್ಲಿ ಒಳ ರೋಗಿಯು ಆಸ್ಪತ್ರೆಯ ಆವರಣದಲ್ಲಿ ಮೃತಪಟ್ಟಿದ್ದಾನೆ. ಹೀಗೆ ಮೃತಪಟ್ಟಿರುವ ವ್ಯಕ್ತಿಯ ಹೆಸರು. ಮಂಜುನಾಥ್(32). ದಾವಣಗೆರೆ ಜಿಲ್ಲೆಯ ಚನ್ನಗರಿ ಪಟ್ಟಣದ ನಿವಾಸಿ. ಮೇ. 19 ರಂದು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣಕ್ಕೆ ಇತನನ್ನು ಕುಟುಂಬಸ್ಥರು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಒಳ ರೋಗಿ ಅದ್ಯಾವಾಗ ಆಸ್ಪತ್ರೆಯಿಂದ ಹೊರಗೆ ಹೋದನೋ ಗೊತ್ತಿಲ್ಲ. ಯಾವುದೇ ಡಿಸ್ಜಾರ್ಚ್ ಪ್ರಕ್ರಿಯೆ ನಡೆಯದೆ, ಇನ್ನೂ ಚೇತರಿಸಿಕೊಳ್ಳದ ರೋಗಿಯು ಒಳರೋಗಿ ವಿಭಾಗದಿಂದ ಹೊರಗೆ ಬಂದಿದ್ದಾನೆ. ಆಸ್ಪತ್ರೆಯ ಸಿಬ್ಬಂದಿ ಈತನನ್ನು ಗಮನಿಸಿಲ್ಲ. ಇದರ ಪರಿಣಾಮ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯು ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಹೌದು ಅತನ ಬ್ಯಾಗ್ನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ದಾಖಲೆ ಸೇರಿದಂತೆ ಇನ್ನಿತರ ದಾಖಲೆಗಳು ಪತ್ತೆಯಾಗಿವೆ. ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯು, ಕ್ಯಾಂಪಸ್ನಲ್ಲಿ ಕೊನೆ ಉಸಿರು ಎಳೆದಿದ್ದಾನೆ. ಈ ಘಟನೆಯಿಂದ ಮೃತನ ಕುಟುಂಬಸ್ಥರು ಮತ್ತು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೀಗೆ ಒಳರೋಗಿ ಆಗಿದ್ದ ಮೃತನು ಹೊರಗೆ ಬಂದಿದ್ದು ಹೇಗೆ. ಬಂದ ಬಳಿಕ ಆತನ ಬಗ್ಗೆ ಯಾರು ಕೂಡಾ ನಿಗಾವಹಿಸಿಲ್ಲ. ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯು ಸೂಕ್ತ ಚಿಕಿತ್ಸೆ ಸಿಗದೇ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಪ್ರಾಣ ಬಿಟ್ಟಿದ್ದಾನೆ. ಮೃತನ ಸಂಬಂಧಿಕರು ಘಟನೆ ಕುರಿತು ಮೆಗ್ಗಾನ್ ಜಿಲ್ಲಾಸ್ಪತ್ರೆಯ ಅಧಿಕಾರಿಗಳ ಮತ್ತು ವೈದ್ಯಕೀಯ ಸಿಬ್ಬಂದಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಸಾವಿರಕ್ಕೂ ಅಧಿಕ ಬೆಡ್ಗಳಿವೆ. ಜೊತೆಗೆ ಮೆಡಿಕಲ್ ಕಾಲೇಜ್ ಇರುವುದರಿಂದ ಇಲ್ಲಿನ ಮೆಡಿಕಲ್ ವಿದ್ಯಾರ್ಥಿಗಳು ಕೂಡ ಜಿಲ್ಲಾಸ್ಪತ್ರೆಯಲ್ಲಿ ಸೇವೆಯನ್ನು ಸಲ್ಲಿಸುತ್ತಾರೆ. ಇಷ್ಟೆಲ್ಲ ಸರಕಾರದಿಂದ ಕೋಟಿ ಕೋಟಿ ಹಣ ಪ್ರತಿ ತಿಂಗಳು ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜ್ಗೆ ಹರಿದು ಬರುತ್ತದೆ. ಆದ್ರೂ, ಕೂಡ ಬಡ ರೋಗಿಗಳಿಗೆ ಸಿಗಬೇಕಾಗಿರುವ ಉತ್ತಮ ಚಿಕಿತ್ಸೆ ಮತ್ತು ಸೌಲಭ್ಯಗಳು ಸಿಗುವುದಿಲ್ಲ. ಇದರಿಂದ ಅನೇಕ ಬಡ ರೋಗಿಗಳು ಇಲ್ಲಿಯೇ ಪ್ರಾಣ ಬಿಡುತ್ತಾರೆ. ದೇವರು ವರ ಕೊಟ್ಟರು ಪೂಜಾರಿ ವರ ಕೊಡುವುದಿಲ್ಲ ಎನ್ನುವ ಗಾದೆಯಂತೆ. ಸರಕಾರ ಕೋಟಿ ಕೋಟಿ ಹಣ ಸರಕಾರಿ ಆಸ್ಪತ್ರೆಗೆ ವೆಚ್ಚ ಮಾಡಿದ್ರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಮೆಗ್ಗಾನ್ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಮತ್ತು ವೈದ್ಯರು, ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಒಳ ರೋಗಿಗಳು ಗಪ್ ಚುಪ್ ಆಗಿ ನಾಪತ್ತೆಯಾಗಿ ಬಿಡುತ್ತಾರೆ. ಈ ಹಿಂದೆ ಈ ರೀತಿ ಅನೇಕ ಒಳರೋಗಿ ನಾಪತ್ತೆ ಕೇಸ್ಗಳಾಗಿವೆ. ಈ ನಡುವೆ ಮತ್ತೊಂದು ಘಟನೆಯು ಸದ್ಯ ಎಲ್ಲರನ್ನು ಬೆಚ್ಚಿಬಿಳಿಸಿದೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿಯ ಅವ್ಯವಸ್ಥೆ ಸರಿಪಡಿಸಲು ಜಿಲ್ಲಾಡಳಿತವು ಯಾವುದೇ ಕಠಿಣ ಕ್ರಮಕ್ಕೆ ಮುಂದಾಗದೇ ಇರುವುದು ರೋಗಿಗಳಿಗೆ ದೊಡ್ಡ ಶಾಪವಾಗಿ ಕಾಡುತ್ತಿದೆ. ಹೊಸ ಸರಕಾರ ಅಧಿಕಾರಕ್ಕೆ ಬಂದಿದೆ. ಇನ್ನಾದರೂ ಬಡವರ ಪಾಲಿನ ಹೈಟೆಕ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆಗಳು ಬದಲಾಗುತ್ತವೆಯೇ ಎನ್ನುವ ನಿರೀಕ್ಷೆಯಲ್ಲಿ ಮಲೆನಾಡಿನ ಬಡರೋಗಿಗಳಿದ್ದಾರೆ.