ಕಾಂಗ್ರೆಸ್ ‘ಅಕ್ಕಿ ಗ್ಯಾರಂಟಿ’: ಕೇಂದ್ರ ಸರ್ಕಾರ ಒಪ್ಪಿದರೂ ಅಕ್ಕಿಭಾಗ್ಯ ಜಾರಿಗೆ ವಿಳಂಬ ಸಾಧ್ಯತೆ

ಬೆಂಗಳೂರು: ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ (Rice) ನೀಡಲು ಒಪ್ಪಿಗೆ ಸೂಚಿಸಿದರೂ ಕರ್ನಾಟಕದಲ್ಲಿ ಅನ್ನಭಾಗ್ಯ ಜಾರಿಗೆ ವಿಳಂಬವಾಗಲಿದೆ. ಇದಕ್ಕೆ ಸಂಬಂಧಿಸಿದ ಹಣಕಾಸು ಪ್ರಕ್ರಿಯೆ ನಡೆಯಲು ಸಂಪೂರ್ಣ ಜೂನ್ ತಿಂಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. ಹೆಚ್ಚುವರಿ 5 ಕೆಜಿ ಅಕ್ಕಿ ನೀಡಲು ಮಾಸಿಕ 742.86 ಕೋಟಿ ನೀಡಬೇಕು. ಎಲ್ಲ ಹಣಕಾಸು ಪ್ರಕ್ರಿಯೆ ಮುಗಿಸಲು 1 ತಿಂಗಳು ಸಮಯ ಬೇಕಾಗುತ್ತದೆ. ಕೇಂದ್ರ ನಿರಾಕರಿಸಿದರೆ ಟೆಂಡರ್ ಪ್ರಕ್ರಿಯೆಗೆ ಮತ್ತಷ್ಟು ಸಮಯ ಬೇಕಾಗುತ್ತದೆ. ಟೆಂಡರ್ ಮೂಲಕ ಅಕ್ಕಿ ಖರೀದಿ ಮಾಡಲು ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಹೊರೆ ಬೀಳಬಹುದು.

ಸದ್ಯ ರಾಜ್ಯದಲ್ಲಿ ಬಿಪಿಎಲ್ ಕಾರ್ಡುದಾರರಿಗೆ 6 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಇದರಲ್ಲಿ 5 ಕೆಜಿ ಉಚಿತ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ರಾಜ್ಯ ಸರ್ಕಾರ ನೀಡುವ ಹೆಚ್ಚುವರಿ ಅಕ್ಕಿಗೆ ಹೆಚ್ಚುವರಿ ಹೊರೆ ಬೀಳಲಿದೆ. ಒಟ್ಟಾರೆಯಾಗಿ ಕಾಂಗ್ರೆಸ್ ಜನರಿಗೆ ಭರವಸೆ ನೀಡಿದಂತೆ, ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿಗೆ ಹೆಚ್ಚುವರಿಯಾಗಿ ಇನ್ನೂ ಐದು ಕೆಜಿ ಅಕ್ಕಿ ಸೇರಿಸಬೇಕು. ಇದಕ್ಕಾಗಿ 742.86 ಕೋಟಿ ಹಣದ ಹೊರೆ ಬೀಳಲಿದೆ.

ಕರ್ನಾಟಕದಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್ ಒಟ್ಟು ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಅದರಲ್ಲಿ ಅಕ್ಕಿಯೂ ಒಂದು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನವೇ 10 ಕೆಜಿ ಅಕ್ಕಿ ಕೊಡಲು ಆದೇಶಿಸುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದರು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ನ ನಾಯಕರೆಲ್ಲರೂ ಚುನಾವಣಾ ಪ್ರಚಾರದ ವೇಳೆ 10 ಕೆಜಿ ಉಚಿತ ಅಕ್ಕಿ ಬಗ್ಗೆ ಘೋಷಣೆ ಮಾಡುತ್ತಾ ಬಂದಿದ್ದರು.