ದಾಂಡೇಲಿ :ರಾಜ್ಯ ವಿಧಾನ ಸಭೆಯ ಸಚಿವ ಸಂಪುಟದಲ್ಲಿ ಆರ್.ವಿ.ಡಿಗೆ ತಪ್ಪಿದ ಸ್ಥಾನ- ನಿರಾಶೆಯಲ್ಲಿ ಕಾಂಗ್ರೆಸ್ಸಿಗರು

ದಾಂಡೇಲಿ : ಅವರು 9 ಬಾರಿ ರಾಜ್ಯ ವಿಧಾನ ಸಭೆಗೆ ಆಯ್ಕೆಯಾದವರು. ಸಿದ್ದರಾಮಯ್ಯನವರಿಗಿಂತ ಮುಂಚೆಯೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದವರು. ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ರಾಜ್ಯವ್ಯಾಪಿ ಶ್ರಮಿಸಿದವರು. ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ವರ್ಚಸ್ಸನ್ನು ಹೊಂದಿದವರು ಇದೇ ಹಳಿಯಾಳ, ದಾಂಡೇಲಿ, ಜೋಯಿಡಾ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಆರ್.ವಿ.ದೇಶಪಾಂಡೆಯವರು.

ಕಳೆದ ಅವಧಿಯಲ್ಲಿಯೂ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಧೂಳಿಪಟವಾದರೂ ಹಳಿಯಾಳ ವಿಧಾನ ಸಭಾ ಕ್ಷೇತ್ರದಲ್ಲಿ ಗೆದ್ದು ಸಾಧಿಸಿದವರು ಇದೇ ದೇಶಪಾಂಡೆಯವರು. ತನ್ನ ಕ್ಷೇತ್ರದ ಪ್ರಚಾರದ ಜೊತೆಗೆ ಜಿಲ್ಲೆಯಾಧ್ಯಂತ ಓಡಾಡಿ ಈ ಬಾರಿ 6 ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 4 ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುಯವಲ್ಲಿ ದೇಶಪಾಂಡೆಯವರ ಪಾತ್ರವೂ ಬಹಳ ಮುಖ್ಯವಾಗಿದೆ. ಹಾಗೆ ನೋಡಿದರೇ ದೇಶಪಾಂಡೆಯವರ ಸುಪುತ್ರ ಪ್ರಶಾಂತ್ ದೇಶಪಾಂಡೆಯವರು ಕಳೆದ ಒಂದುವರೆ ವರ್ಷಗಳಿಂದ ಯಲ್ಲಾಪುರ-ಮುಂಡಗೋಡ ಕ್ಷೇತ್ರದಲ್ಲಿ ಮಾಡಿದ ಗ್ರೌಂಡ್ ವರ್ಕಿನ ಪರಿಣಾಮವಾಗಿ ಕಾಂಗ್ರೆಸ್ ಆ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಮತಗಳನ್ನು ಪಡೆದಿರುವುದನ್ನು ಇಲ್ಲಿ ಗಮನಿಸಬಹುದು.

ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ನಂತರದಲ್ಲಿ ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಾಧನೆಯನ್ನು ನೋಡಿದಾಗ, ಬರಲಿರುವ ಲೋಕಸಭಾ ಚುನಾವಣೆಯಲ್ಲಿಯೂ ಬಹಳಷ್ಟು ವರ್ಷಗಳ ನಂತರ ಕಾಂಗ್ರೆಸ್ ವಿಜಯ ಪತಾಕೆಯನ್ನು ಸಾಧಿಸಬಹುದೆನ್ನುವ ಲೆಕ್ಕಚಾರ ಕ್ಷೇತ್ರದಲ್ಲಿತ್ತು. ಹೌದು, ಈ ಬಾರಿ ಆರ್.ವಿ.ದೇಶಪಾಂಡೆಯವರು ಸಂಪುಟ ದರ್ಜೆ ಸಚಿವ ಪದವಿಯ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇರುತ್ತಿದ್ದಲ್ಲಿ ಈ ಬಾರಿ ಕೆನರಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷಕ್ಕೆ ಪ್ರಸಾದದ ರೂಪದಲ್ಲಿ ಸಿಗುತ್ತಿತ್ತು ಎಂಬ ಗಟ್ಟಿ ಚರ್ಚೆ ಕ್ಷೇತ್ರದಲ್ಲಿ ನಡೆಯುತ್ತಿದೆ.

ಕಳೆದ 45 ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ವರ್ಚಸ್ಸನ್ನು ಹೊಂದಿದ್ದ ಆರ್.ವಿ.ದೇಶಪಾಂಡೆಯವರಿಗೆ ಈ ಸರಕಾರದಲ್ಲಿ ಸಚಿವ ಪದವಿಯನ್ನು ನೀಡಲಾಗಿಲ್ಲ ಎಂಬ ಬೇಸರ ಕ್ಷೇತ್ರದ ಕಾಂಗ್ರೆಸಿಗರಲ್ಲಿ ಕಂಡು ಬರತೊಡಗಿದೆ. ಸಿದ್ದರಾಮಯ್ಯನವರು ಕ್ಷೇತ್ರಕ್ಕೆ ಬಂದಂತಹ ಸಂದರ್ಭದಲ್ಲಿ ದೇಶಪಾಂಡೆಯವರ ಸೇವೆ ಕ್ಷೇತ್ರಕ್ಕೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಬೇಕು ಎಂದು ನೀಡಿದ ಹೇಳಿಕೆಯನ್ನು ಗಮನಿಸುವುದಾದರೇ ಕಾಂಗ್ರೆಸಿನಲ್ಲಿ ಸಿದ್ದರಾಮಯ್ಯನವರ ಮಾತಿಗೂ ಬೆಲೆ ಇಲ್ಲವೆನೋ ಎಂಬ ಚಿಂತೆ ಕ್ಷೇತ್ರದ ಕಾಂಗ್ರೆಸ್ಸಿಗರದ್ದಾಗಿದೆ. ಒಂದಂತು ನಿಜ, ದೇಶಪಾಂಡೆಯವರಿಗೆ ಸಚಿವ ಪದವಿ ಸಿಗದಿರುವುದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಎಂದಿನಂತೆ ಸೋತು ಸುಣ್ಣವಾಗುವದರಲ್ಲಿ ಯಾವ ಅನುಮಾನವೂ ಇಲ್ಲ ಎಂಬ ಅಭಿಪ್ರಾಯ ಕ್ಷೇತ್ರದ ಕಾಂಗ್ರೆಸ್ಸಿಗರದ್ದಾಗಿದೆ.