ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡದಿದ್ದಕ್ಕೆ ಕಾಂಗ್ರೆಸ್ ಕಚೇರಿ ಮುಂದೆ ಸಾಯ್ತೀನಿ, ಅಭಿಮಾನಿಯ ಪತ್ರ ವೈರಲ್

ಚಾಮರಾಜನಗರ: ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ( C Puttarangashetty) ಸಚಿವ ಸ್ಥಾನ ಕೈತಪ್ಪಿದ್ದರಿಂದ ಕಾಂಗ್ರೆಸ್ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಭಿಮಾನಿಯೋರ್ವನ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಾಮರಾಜನಗರ ತಾಲೂಕು ನಲ್ಲೂರುಮೋಳೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಸಿ.ಪುಟ್ಟರಂಗಶೆಟ್ಟಿ ಅಭಿಮಾನಿಯಾಗಿರುವ ಚಂದ್ರಶೇಖರ್ ಎನ್ನುವವರು ಪತ್ರ ಬರೆದಿದ್ದು, ಜಿಲ್ಲಾ ಅಥವಾ ಕೆಪಿಸಿಸಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನ್ನ ಆತ್ಮಹತ್ಯೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ಗಾಂಧಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಕಾರಣ ಎಂದು ಪತ್ರದಲ್ಲಿ ಬರೆದಿದ್ದು, ಇದೀಗ ಆ ಪತ್ರ ವೈರಲ್ ಆಗಿದೆ.

ನಾನು ಚಂದ್ರಶೇಖರ್ s/o ನಂಜುಂಡಶೆಟ್ಟಿ ನಲ್ಲೂರುಮೋಳೆ ಕಾಂಗ್ರೆಸ್ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡಿದ್ದು. ನಂಬಿಕೆ ದ್ರೋಹದ ಕೆಲಸವನ್ನು ಕಾಂಗ್ರೆಸ್ ಮತ್ತು ಹೈಕಮಾಂಡ್ ಮಾಡಿದೆ. ಸಿ.ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ‌ ಕೊಟ್ಟಿಲ್ಲದಿದ್ದರಿಂದ ಜಿಲ್ಲಾ ಅಥವಾ ಕೆಪಿಸಿಸಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ.

ನನ್ನ ಆತ್ಮಹತ್ಯೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ಗಾಂಧಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರೇ ಕಾರಣಕರ್ತರು. ನನ್ನ‌ ಸಾವಿನಲ್ಲೂ ಸಹ ನಮ್ಮ ಉಪ್ಪಾರ ಸಮಾಜ ನಿಮ್ಮ ಪಕ್ಷವನ್ನು ಬಿಟ್ಟು ಉಗ್ರ ಹೋರಾಟ ಮಾಡುತ್ತದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ 21 ವರ್ಷದ ಚಂದ್ರಶೇಖರ್, ನಾನು ಪುಟ್ಟರಂಗಶೆಟ್ಟಿ ಅವರ ಪಕ್ಕಾ ಅಭಿಮಾನಿ. ಇಂದು ಬೆಳಗ್ಗೆ ಕಾಂಗ್ರೆಸ್ ಕಚೇರಿಗೆ ನನ್ನ ಪತ್ರವನ್ನು ತಲುಪಿಸುತ್ತೇನೆ. ಉಪಸಭಾಪತಿ ಸ್ಥಾನಬೇಡ. ಉಪ್ಪಾರ ಸಮಾಜದಲ್ಲಿ ನಾಲ್ಕು, ಐದು ಶಾಸಕರಿದ್ದಿದ್ದರೆ‌ ಈ ಸ್ಥಾನ ಸ್ವೀಕಾರ ಮಾಡಬಹುದಿತ್ತು. ಆದರೆ‌ ಒಬ್ಬರೇ ಇರುವುದರಿಂದ ಸಚಿನ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಚಾಮರಾಜನಗರದಲ್ಲಿ ಉಪ್ಪಾರ ಸಮಾಜ ಮುಖಂಡರಿಂದ ಪ್ರತಿಭಟನೆ
ಇನ್ನು ಪುಟ್ಟರಂಗಶೆಟ್ಟಿ ಅವರಿಗೆ ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಉಪ್ಪಾರ ಸಮುದಾಯ ಅಸಮಾಧಾನಗೊಂಡಿದ್ದು, ಚಾಮರಾಜನಗರದಲ್ಲಿ ಇಂದು (ಮೇ 27) ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಉಪ್ಪಾರ ಸಮುದಾಯದ ಏಕೈಕ ಶಾಸಕ ಪುಟ್ಟರಂಗಶೆಟ್ಟಿ. ನಾಲ್ಕು ಬಾರಿ ಗೆದ್ದಿದ್ದಾರೆ. ಈ ಬಾರಿ ಪ್ರಭಾವಿ ಸೋಮಣ್ಣ ವಿರುದ್ಧ ಅಧಿಕ ಮತಗಳಿಂದ ಗೆದ್ದರೂ ಪುಟ್ಟರಂಗಶೆಟ್ಟಿ ಅವರನ್ನು ಕಡೆಗಣನೆ ಮಾಡಲಾಗಿದೆ ಎಂದು ಆರೋಪಿಸಿ ನಗರದ ಭುವನೇಶ್ವರಿ ವೃತ್ತದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಡೆಗೆ ಉಪ್ಪಾರ ಸಮುದಾಯ ಪ್ರತಿಭಟಿಸಿತು.