ಅಂಕೋಲಾ: ಫೋಟೋ ಸ್ಟುಡಿಯೋಗೆ ಬೆಂಕಿ ತಗುಲಿ ಅಪಾರ ಹಾನಿ


ಅಂಕೋಲಾ: ತಾಲೂಕಿನ ಫೋಟೋ ಸ್ಟುಡಿಯೋಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದ ಪರಿಣಾಮ ಅಪಾರ ಪ್ರಮಾಣದ ಹಾನಿ ಉಂಟಾದ ಘಟನೆ ಶನಿವಾರ ಮುಂಜಾನೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಸಂತೋಷ ನಾಯ್ಕ ಮಾಲಿಕತ್ವದ ಪಟ್ಟಣದ ಅರ್ಬನ ಬ್ಯಾಂಕ್ ಎದುರಿನ ಕಟ್ಟಡದ ಮೊದಲನೇ ಮಹಡಿಯಲ್ಲಿರುವ ಸಂತೋಷ ಡಿಜಿಟಲ್ ಸ್ಟುಡಿಯೋಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದ ಪರಿಣಾಮ ಸ್ಟುಡಿಯೋದೊಳಗಿದ್ದ ಕ್ಯಾಮೆರಾ ಕಂಪ್ಯೂಟರ್ ಸ್ಟುಡಿಯೋ ಲೈಟ್ಗಳು ಸೇರಿದಂತೆ ಇನ್ನಿತರ ವಸ್ತುಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಮುಂಜಾನೆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಸ್ಟುಡಿಯೋದ ಒಳಗಡೆಯಿಂದ ಹೊರಗೆ ಹೊಗೆ ಕಾಣಿಸಿಕೊಂಡಿದ್ದನ್ನ ಗಮನಿಸಿ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ ಅಷ್ಟೊತ್ತಿಗಾಗಲೇ ಸ್ಟುಡಿಯೋದೊಳಗಿದ್ದ ಎಲ್ಲ ಬೆಲೆಬಾಳುವ ಸಾಮಾನುಗಳು ಬೆಂಕಿಗಾವತಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಸುಮಾರು 12 ಲಕ್ಷ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ ಎಂದು ಅಂದಾಜಿಸಲಾಗಿದೆ.