ಮಧುಗಿರಿ ಶಾಸಕ ಕೆಎನ್ ರಾಜಣ್ಣರಿಗೆ ಒಲಿದ ಸಚಿವ ಸ್ಥಾನ

ತುಮಕೂರು: ಮಧುಗಿರಿ ಕಾಂಗ್ರೆಸ್ ಶಾಸಕರಾಗಿರುವ ಕೆಎನ್ ರಾಜಣ್ಣ(KN Rajanna)ರಿಗೆ ಸಚಿವ ಸ್ಥಾನ ಒಲಿದಿದೆ. ಅದರಂತೆ ಇಂದು(ಮೇ.27) ಪ್ರಮಾಣ ವಚನ ಸ್ವೀಕರಿಸಿದರು. ತುಮಕೂರು ತಾಲೂಕಿನ ಕ್ಯಾತಸಂದ್ರದಲ್ಲಿ 1951 ಏಪ್ರಿಲ್ 13 ರಂದು ಜನಿಸಿದ ಇವರು ಬಿಎಸ್ಸಿ, ಎಲ್ಎಲ್ಬಿ ಮುಗಿಸಿದ್ದಾರೆ. ಬಳಿಕ ವಕೀಲ ವೃತ್ತಿ ಮಾಡುತ್ತ ಕೃಷಿಯಲ್ಲಿ ತೊಡಗಿಕೊಂಡರು. ನಂತರ ಶ್ರೀಮತಿ ಎಸ್ ಆರ್ ಶಾಂತಲಾ ಅವರನ್ನ ಮದುವೆಯಾದರು. ಇವರಿಗೆ ಇಬ್ಬರು ಪುತ್ರರು ಹಾಗೂ ಒಬ್ಬಳು ಮಗಳಿದ್ದಾಳೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿರುವ ರಾಜಣ್ಣ, ಪ್ರಬಲ ಸಚಿವ ಆಕಾಂಕ್ಷಿಯಾಗಿದ್ದರು. ಕೊನೆಗೂ ಸಚಿವ ಸ್ಥಾನ ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ. ಸಹಕಾರಿ ಖಾತೆಯ ಮೇಲೆ ಕಣ್ಣಿಟ್ಟಿರುವ ರಾಜಣ್ಣರಿಗೆ ಯಾವ ಖಾತೆ ಒಲಿಯಲಿದೆ ಎಂದು ಕಾದು ನೋಡಬೇಕಿದೆ.

ಮುಖ್ಯಮಂತ್ರಿ ಫೈಟ್ನಲ್ಲಿ ಸಿದ್ದರಾಮಯ್ಯನವರಿಗೆ ಮತ ಹಾಕಿದ್ದೇನೆ ಎಂದು ಬಹಿರಂಗಪಡಿಸಿದ್ದ ಕೆಎನ್ ರಾಜಣ್ಣ!
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ್ದ ಕಾಂಗ್ರೆಸ್‌ಗೆ ಈಗ ಮುಖ್ಯಮಂತ್ರಿ ಆಯ್ಕೆ ವಿಚಾರ ದೊಡ್ಡ ಕಗ್ಗಂಟಾಗಿತ್ತು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಯಾರು ಸಿಎಂ ಆಗಬೇಕು ಎಂಬ ಪ್ರಶ್ನೆ ಎದ್ದಿತ್ತು, ಈ ಕಾರಣಕ್ಕೆ ತಡರಾತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಾಗಿತ್ತು. ಬೆಂಗಳೂರಿನ ಹೋಟೆಲ್‌ನಲ್ಲಿ ಭಾನುವಾರ(ಮೇ.15) ತಡರಾತ್ರಿ ಆರಂಭವಾದ ಸಭೆ ಮಧ್ಯರಾತ್ರಿ 1.30ರವರೆಗೆ ನಡೆದಿತ್ತು. ಇದರಲ್ಲಿ ಹೊಸದಾಗಿ ಆಯ್ಕೆಯಾದ ಎಲ್ಲಾ 135 ಶಾಸಕರು ಭಾಗವಹಿಸಿದ್ದರು. ಮುಂದಿನ ಸಿಎಂ ಯಾರಾಗಬೇಕು ಎಂದು ಗುಪ್ತ ಮತದಾನ ಮಾಡಿರುವ ಶಾಸಕರು ಸುಮ್ಮನಿದ್ದರೇ ಮಧುಗಿರಿ ಶಾಸಕ ಕೆಎನ್ ರಾಜಣ್ಣ ಮಾತ್ರ ತಾವು ಸಿದ್ದರಾಮಯ್ಯಗೆ ಬೆಂಬಲ ನೀಡಿರುವುದಾಗಿ ತಿಳಿಸಿದ್ದರು.

ಹೌದು ಮತದಾನ ನಡೆಯುತ್ತಿರುವಾಗ ಮತ ಚಲಾಯಿಸಿ ಬಂದ ಕೆಎನ್ ರಾಜಣ್ಣ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದು, “ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದೆ. ಆದರೆ, ಯಾರು ಮತ ಚಲಾಯಿಸಿದ್ದಾರೋ ಗೊತ್ತಿಲ್ಲ. ಆದರೆ, ನನ್ನ ಮತ ನಾನು ಸಿದ್ದರಾಮಯ್ಯ ಅವರಿಗೆ ಹಾಕಿದ್ದೇನೆ. ಹೆಚ್ಚು ಶಾಸಕರು ಸಿದ್ದರಾಮಯ್ಯ ಅವರಿಗೆ ಮತ ಹಾಕಿರುವ ಸಾಧ್ಯತೆಯಿದೆ ಎಂದು ಬಹಿರಂಗವಾಗಿ ಹೇಳಿದ್ದರು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆದರು. ಇದೀಗ ರಾಜಣ್ಣನಿಗೂ ಸಚಿವ ಸ್ಥಾನ ಸಿಕ್ಕಿದೆ.