ಹಳಿಯಾಳ : ಪಟ್ಟಣದ ವನಶ್ರೀ ವೃತ್ತ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಮಟ್ಕಾ ಜೂಜಾಟಕ್ಕೆ ಬಳಸುತ್ತಿದ್ದ ನಗದನ್ನು ವಶಪಡಿಸಿಕೊಂಡ ಘಟನೆ ನಡೆದಿರುವ ಬಗ್ಗೆ ಇಂದು ಬುಧವಾರ ಮಾಹಿತಿ ಲಭ್ಯವಾಗಿದೆ.
ಪಟ್ಟಣದ ಇಂದಿರಾನಗರದ ನಿವಾಸಿ ರಾಜು ನಾಗಪ್ಪ ಮಾದರ ಎಂಬಾತನು ಪಟ್ಟಣದ ವನಶ್ರೀ ವೃತ್ತ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ ಒಂದು ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ ಸಂಖ್ಯೆ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ,ಮಟ್ಕಾ ಜೂಜಾಟ ಆಡಿಸುತ್ತಿದ್ದನು. ಈ ಸಂದರ್ಭದಲ್ಲಿ ಹಳಿಯಾಳ ಪೊಲೀಸರು ದಾಳಿ ನಡೆಸಿ ಮಟ್ಕಾ ಬರೆದಿರುವ ಚೀಟಿ ಹಾಗೂ ನಗದು ರೂ: 760/- ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಕಲಂ 78(3) ರ ಕೆ.ಪಿ.ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖಾ ವಿಭಾಗದ ಪಿಎಸೈ ಅಮೀನ್ ಸಾಬ್ ಅತ್ತಾರ ಅವರು ದಾಳಿ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹಳಿಯಾಳ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಟ್ಕಾ ಜೂಜಾಟ ಎಗ್ಗಿಲ್ಲದೇ ನಡೆಯುತ್ತಿದೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿದ್ದು, ಈ ನಿಟ್ಟಿನಲ್ಲಿ ಮಟ್ಕಾ ಚೀಟಿ ಬರೆಯುವವರನ್ನು ಹಿಡಿದ ಬಳಿಕ ಅವರನ್ನು ವಿಚಾರಣೆಗೊಳಪಡಿಸಿದ್ದಲ್ಲಿ ಮಟ್ಕಾ ಬುಕ್ಕಿಗಳನ್ನು ಬಂಧಿಸಿ ಅವರ ಹೆಡೆಮುರಿ ಕಟ್ಟಿದ್ದಲ್ಲಿ ಮಾತ್ರ ಮಟ್ಕಾ ಜೂಜಾಟ ನಿಯಂತ್ರಣಕ್ಕೆ ಬರಲಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಎಚ್ಚೆತ್ತು ಕಾರ್ಯೋನ್ಮುಖವಾಗಬೇಕಿದೆ.