ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಬಿಜೆಪಿಯಿಂದ ಮನವಿ ಸಲ್ಲಿಕೆ

ಹಳಿಯಾಳ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾಜಿ ಶಾಸಕರಾದ ಸುನೀಲ ಹೆಗಡೆಯವರ ನೇತೃತ್ವದಲ್ಲಿ ಇಂದು ಮಂಗಳವಾರ ಮಧ್ಯಾಹ್ನ ಹಳಿಯಾಳದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸುನೀಲ ಹೆಗಡೆ ಅವರು ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ತಾಲೂಕಿನಲ್ಲಿ ರೈತಾಪಿ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು ಬೇಸಿಗೆಯ ಧಗೆಯಿಂದಾಗಿ ಜಾನುವಾರುಗಳಿಗೂ ನೀರು ಇಲ್ಲದಂತಾಗಿದೆ. ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಹಾಗೂ ಜನರಿಗೆ ಅನೇಕ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷವು ಪ್ರಮುಖವಾಗಿ ಪ್ರತಿ ಮನೆಗೆ 200 ಯುನಿಟ್ ಕರೆಂಟ್ ಉಚಿತವಾಗಿ ನೀಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದು, ತಾಲೂಕಿನಲ್ಲಿ ಕೂಲಿ ಕಾರ್ಮಿಕರು, ರೈತರು ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಯಾವುದೇ ಕಾರಣಕ್ಕೂ ಇದರಲ್ಲಿ ತಾರತಮ್ಯ ಮಾಡಬಾರದು. ಒಂದು ವೇಳೆ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾದ ಗಣಪತಿ ಕರಂಜೇಕರ, ಪ್ರಧಾನ ಕಾರ್ಯದರ್ಶಿಗಳಾದ ವಿ.ಎಂ.ಪಾಟೀಲ್, ಉಪಾಧ್ಯಕ್ಷರಾದ ವಾಸುದೇವ ಪೂಜಾರಿ, ಪುರಸಭೆ ಸದಸ್ಯರಾದ ಚಂದ್ರಕಾಂತ ಕಮ್ಮಾರ, ರಾಜೇಶ್ವರಿ ಹಿರೇಮಠ, ಸಂಗೀತಾ ಜಾಧವ, ಪ್ರಮುಖರಾದ ಶಿವಾಜಿ ನರಸಾನಿ, ಚೂಡಪ್ಪ ಬೋಬಾಟಿ, ಸಂತಾನ ಸಾವಂತ, ಉಮೇಶ ದೇಶಪಾಂಡೆ, ಯಲ್ಲಪ್ಪಾ ಹೊನ್ನೋಜಿ, ಆನಂದ ಕಂಚನಾಳಕರ, ತುಕಾರಾಮ ಪಟ್ಟೇಕರ, ಹನುಮಂತ ಚಲವಾದಿ, ಮೋಹನ ಮೌಳಂಗಿ, ಈಶ್ವರ ಉಪ್ಪಿನ ಮೊದಲಾದವರು ಉಪಸ್ಥಿತರಿದ್ದರು.