ನವದೆಹಲಿ: ಭಾರತೀಯ ಸ್ಪರ್ಧಾ ಆಯೋಗ ಇದೀಗ ಹೆಚ್ಚೆಚ್ಚ ಪ್ರಕರಣಗಳ ಮೇಲೆ ನಿಗಾ ವಹಿಸುತ್ತಿದೆ. ಹಲವು ಕಂಪನಿಗಳಿಗೆ ದಂಡವನ್ನೂ ವಿಧಿಸಿದೆ. ಇತ್ತೀಚೆಗೆ ಗೂಗಲ್ ಮೇಲೆಯೂ ದಂಡ ವಿಧಿಸಿದ್ದು ನೆನಪಿರಬಹುದು. ಸಿಸಿಐ ಆದೇಶ ಪ್ರಶ್ನಿಸಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮಮನವಿ ನ್ಯಾಯಮಂಡಳಿ ಮುಂದೆ ಮೇಲ್ಮನವಿಗೆ ಹೋಗುವ ಅವಕಾಶ ಇದೆ. ಇದೀಗ ಇಂಥ ಮೇಲ್ಮನವಿಗಳ ಅವಕಾಶವನ್ನು ದುರುಪಯೋಗಿಸಿಕೊಳ್ಳುವ ಸಾಧ್ಯತೆ ತಡೆಯಲು ಸರಕಾರ ಕೆಲ ಕ್ರಮಗಳನ್ನು ಕೈಗೊಂಡಿದೆ. ಅದರಂತೆ, ಎನ್ಸಿಎಲ್ಎಟಿಗೆ ಮೇಲ್ಮನವಿ ಹೋಗುವ ಮುನ್ನ ಸಿಸಿಐ ವಿಧಿಸಿರುವ ದಂಡದ ಮೊತ್ತದ ಶೇ. 25ರಷ್ಟು ಹಣವನ್ನು ಠೇವಣಿ ಇಡಬೇಕೆಂದು ಸರ್ಕಾರ ಕಡ್ಡಾಯಗೊಳಿಸಿದೆ. ಅಲ್ಲದೇ, ಸುಳ್ಳು ದಾಖಲೆ ಅಥವಾ ಹೇಳಿಕೆಗಳನ್ನು ನೀಡಿದರೆ ಈಗಿರುವ 1 ಕೋಟಿ ರೂ ಬದಲು 5 ಕೋಟಿ ರೂ ದಂಡ ವಿಧಿಸಲು ನಿರ್ಧರಿಸಲಾಗಿದೆ.
2023ರ ಸ್ಪರ್ಧಾ ತಿದ್ದುಪಡಿ ಕಾಯ್ದೆಯನ್ನು ಬಹಳ ತಜ್ಞರು ಸ್ವಾಗತಿಸಿದ್ದಾರೆ. ಸ್ಪರ್ಧಾತ್ಮಕತೆಗೆ ವಿರುದ್ಧವಾಗಿ ಮಾರುಕಟ್ಟೆಯಲ್ಲಿ ಬಿಗಿಹಿಡಿತ ಹೊಂದುವವರನ್ನು ಹೆಡೆಮುರಿ ಕಟ್ಟಲು ಸರ್ಕಾರಕ್ಕೆ ಈ ಕಾಯ್ದೆ ಒಳ್ಳೆಯ ಅಸ್ತ್ರವಾಗಿದೆ. ಈಗ ಸೇರಿಸಿರುವ ಹೊಸ ನಿಯಮಗಳೂ ಕೂಡ ಸ್ವಾಗತಾರ್ಹವಾಗಿವೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಸಿಸಿಐ ವಿಧಿಸಿದ ಶೇ. 25ರಷ್ಟು ದಂಡಮೊತ್ತವನ್ನು ಎನ್ಸಿಎಲ್ಟಿಗೆ ಮೇಲ್ಮನವಿ ಸಲ್ಲಿಸುವ ಮುನ್ನ ಠೇವಣಿ ಇಡಬೇಕೆಂದು ಮಾಡಲಾಗಿರುವ ನಿಯಮದಿಂದ ಅನಗತ್ಯ ಮೇಲ್ಮನವಿಗಳು ತಪ್ಪಲಿದೆ ಎಂದು ಟ್ಯಾಕ್ಸ್ಮ್ಯಾನ್ ಕಂಪನಿಯ ಡಿಜಿಎಂ ರಚಿತ್ ಶರ್ಮಾ ಹೇಳಿದ್ದಾರೆ.