ದಾಂಡೇಲಿ : ಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವ ದಾಂಡೇಲಿ, ಜೋಯಿಡಾ ಮತ್ತು ಹಳಿಯಾಳ ತಾಲ್ಲೂಕಿನ ಅರಣ್ಯ ಪ್ರದೇಶಗಳಲ್ಲಿ ಆರಂಭಗೊಂಡಿದ್ದ ಮೂರು ದಿನಗಳ ಆನೆ ಗಣತಿ ಕಾರ್ಯವು ಯಶಸ್ವಿ ಸಂಪನ್ನಗೊಂಡಿತು.
ದಕ್ಷಿಣದ ರಾಜ್ಯಗಳಲ್ಲಿ ಆನೆ ಗಣತಿ ಕಾರ್ಯವನ್ನು ಅರಣ್ಯ ಇಲಾಖೆ ನಡೆಸುತ್ತಿರುವ ಹಿನ್ನಲೆಯಲ್ಲಿ ದಾಂಡೇಲಿ, ಜೋಯಿಡಾ ಮತ್ತು ಹಳಿಯಾಳ ತಾಲ್ಲೂಕುಗಳಲ್ಲಿಯೂ ಆನೆ ಗಣತಿ ಕಾರ್ಯವನ್ನು ಹಮ್ಮಿಕೊಳ್ಳಲಾಯ್ತು. ವನ್ಯಜೀವಿ ಇಲಾಖೆಯ ನಿರ್ದೇಶಕರಾದ ಮರಿಯಾ ಕ್ರಿಸ್ತರಾಜ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಸ್.ಎಸ್.ನಿಂಗಾಣಿ ಹಾಗೂ ಅಮರಾಕ್ಷರ ಅವರ ಮಾರ್ಗದರ್ಶನದಲ್ಲಿ ವನ್ಯಜೀವಿ ಇಲಾಖೆಯ ಎಲ್ಲ ವಲಯಾರಣ್ಯಾಧಿಕಾರಿಗಳ ನೇತೃತ್ವದಲ್ಲಿ ತಜ್ಷರ ತಂಡವನ್ನು ರಚಿಸಿ ಆನೆ ಗಣತಿ ಕಾರ್ಯವನ್ನು ವಿವಿಧ ಮಾದರಿಗಳಲ್ಲಿ ಮಾಡಲಾಗಿತ್ತು. ಆನೆಗಣತಿ ಕಾರ್ಯ ಅತ್ಯಂತ ಕುತೂಹಲಕಾರಿ ಮತ್ತು ಅಷ್ಟೇ ಜೀವಭಯದೊಂದಿಗೆ ನಡೆಸುವ ಗಣತಿ ಎಂದೆ ಹೇಳಲಾಗುತ್ತಿದೆ.
ವನ್ಯಜೀವಿ ಇಲಾಖೆಯ ನಿರ್ದೇಶಕರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯಾರಣ್ಯಾಧಿಕಾರಿಗಳು, ಉಪ ವಲಯಾರಣ್ಯಾಧಿಕಾರಿಗಳು, ಇಲಾಖೆಯ ಸಿಬ್ಬಂದಿಗಳು ಆನೆ ಗಣತಿಯ ತಜ್ಞರ ತಂಡಕ್ಕೆ ಸಂಪೂರ್ಣ ಸಹಕಾರವನ್ನು ನೀಡಿ ಗಮನ ಸೆಳೆದರು.