ಹಳಿಯಾಳ : ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಅವರ ಪರಮಾಪ್ತರಾದ ಹಳಿಯಾಳ-ದಾಂಡೇಲಿ-ಜೋಯಿಡಾ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಆರ್.ವಿ.ದೇಶಪಾಂಡೆಯವರಿಗೆ ಸಚಿವ ಪದವಿಯೊಂದಿಗೆ ಪ್ರಬಲ ಖಾತೆ ಸಿಗುವ ಸಾಧ್ಯತೆ ದಟ್ಟವಾಗತೊಡಗಿದೆ.
ದೇಶಪಾಂಡೆಯವರ ಚುನಾವಣಾ ಪ್ರಚಾರಕ್ಕಾಗಿ ಹಳಿಯಾಳ ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಸಿದ್ದರಾಮಯ್ಯನವರು ತಮ್ಮ ಭಾಷಣದಲ್ಲಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರುವುದು ನಿಶ್ಚಿತ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೇ ಆರ್.ವಿ.ದೇಶಪಾಂಡೆಯವರ ಸೇವೆ ಇಡೀ ರಾಜ್ಯಕ್ಕೆ ಅನಿವಾರ್ಯವಾಗಿ ಬೇಕಾಗಿದೆ. ದೇಶಪಾಂಡೆಯವರು ಕೇವಲ ಕ್ಷೇತ್ರಕ್ಕೆ ಮಾತ್ರ ಶಾಸಕರಲ್ಲ, ಅವರು ಇಡೀ ರಾಜ್ಯಕ್ಕೆ ನಾಯಕರು ಎಂದು ಹೇಳಿ, ನಾನು ಅವರು ಜೊತೆ ಜೊತೆಯಾಗಿ ವಿಧಾನ ಸಭೆಯನ್ನು ಪ್ರವೇಶಿಸಿದವವರು. ವಯಸ್ಸಿನಲ್ಲಿ ನನಗಿಂತ ನಾಲ್ಕು ತಿಂಗಳು ದೊಡ್ಡವರಷ್ಟೆ ಎಂದು ಹಾಸ್ಯ ಚಟಾಕಿಯನ್ನು ಹಾರಿಸುವ ಮೂಲಕ ತನ್ನ ಮತ್ತು ದೇಶಪಾಂಡೆಯವರ ನಡುವಿನ ಬಾಂದವ್ಯವನ್ನು ವಿವರಿಸಿದ್ದರು. ಸಿದ್ದರಾಮಯ್ಯನವರು ದೇಶಪಾಂಡೆಯವರ ಬಗ್ಗೆ ವಿಶೇಷವಾದ ಗೌರವ ಮತ್ತು ಪ್ರೀತಿಯಿಟ್ಟುಕೊಂಡ ಹಿನ್ನಲೆಯಲ್ಲಿ ಹಾಗೂ ಐತಿಹಾಸಿಕ 9ನೇ ಬಾರಿಗೆ ವಿಧಾನ ಸಭೆಗೆ ಪ್ರವೇಶ ಮಾಡಿದ ಹೆಗ್ಗಳಿಕೆಯನ್ನು ಹೊಂದಿರುವುದನ್ನು ಗಮನಿಸಿ ಮತ್ತು ದೇಶಪಾಂಡೆಯವರ ಮುತ್ಸದ್ದಿತನವನ್ನು ಗಮನಿಸಿ ಅವರಿಗೆ ಸಚಿವ ಪದವಿಯೊಂದಿಗೆ ಪ್ರಬಲ ಖಾತೆಯನ್ನು ಕೊಡುವ ಸಾಧ್ಯತೆಯ ಬಗ್ಗೆ ಕ್ಷೇತ್ರದಲ್ಲಿ ಚರ್ಚೆಯಾಗತೊಡಗಿದೆ.