ಹಳಿಯಾಳ ತಾಲ್ಲೂಕಿನ ಕರ್ಲಕಟ್ಟಾ ಗ್ರಾಮದಲ್ಲಿ ಅರಣ್ಯ ರಕ್ಷಕರೊಬ್ಬರ ಕೊಲೆ

ಹಳಿಯಾಳ : ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಅರಣ್ಯ ರಕ್ಷಕರೊಬ್ಬರ ಕಾಲು ಕಡಿದು ಕೊಲೆ ಮಾಡಿದ ಅಮಾನವೀಯ ಘಟನೆ ಹಳಿಯಾಳ ತಾಲ್ಲೂಕಿನ ಕರ್ಲಕಟ್ಟಾ ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಕರ್ಲಕಟ್ಟಾ ಗ್ರಾಮದ ನಿವಾಸಿ 52 ವರ್ಷ ವಯಸ್ಸಿನ ಪರಶುರಾಮ ತೋರಸ್ಕರ್ ಎಂಬವರೆ ಕೊಲೆಯಾದ ದುರ್ದೈವಿಯಾಗಿದ್ದಾರೆ. ಇವರು ತನ್ನ ಕರ್ಲಕಟ್ಟಾದಲ್ಲಿರುವ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಇವರ ಮೇಲೆ ದಾಳಿ ನಡೆಸಲಾಗಿದೆ. ಇವರು 2021 ರಲ್ಲಿ ಕರ್ಲಕಟ್ಟಾ ಗ್ರಾಮದ ಬಳಿ ಯಡೋಗಾದ ರೈತನಿಂದ 3.5 ಎಕರೆ ಆಸ್ತಿ ಖರೀದಿ ಮಾಡಿದ್ದರು. ಆಸ್ತಿ ಖರೀದಿ ವಿಚಾರದಲ್ಲಿ ಗ್ರಾಮದ ಕೆಲವು ವ್ಯಕ್ತಿಗಳೊಂದಿಗೆ ನಿರಂತರ ಕಲಹ ಏರ್ಪಟ್ಟಿತ್ತು ಎನ್ನಲಾಗಿದ್ದು, ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಈ ಜಾಗದ ಕುರಿತಾಗಿ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.

ಆರೋಪಿ ಮಚ್ಚಿನಿಂದ ಎರಡು ಕಾಲುಗಳನ್ನು ಕತ್ತರಿಸಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಪರಶುರಾಮ ಅವರು ಹೊಲದಲ್ಲೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಎಸ್.ಪಿ ಎನ್.ವಿಷ್ಣುವರ್ಧನ್, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಸುರೇಶ್, ಪಿಎಸೈಗಳಾದ ವಿನೋದ್.ಎಸ್.ಕೆ ಮತ್ತು ಅಮೀನ್ ಅತ್ತಾರ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಈಗಾಗಲೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದ್ದು, ಪ್ರಕರಣ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕೊಲೆಯಾದ ಪರಶುರಾಮ ತೋರಸ್ಕರ್ ಅವರು ಉರಗಪ್ರೇಮಿಯಾಗಿ ಸಾಕಷ್ಟು ಸಂಖ್ಯೆಯಲ್ಲಿ ಹಾವುಗಳನ್ನು ಸಂರಕ್ಷಿಸಿದ ಹಿರಿಮೆಯನ್ನು ಹೊಂದಿದ್ದರು