ಹಳಿಯಾಳ : ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರದ ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳಿಂದ ಜನ ಬೇಸತ್ತಿದ್ದಾರೆ. ದೈನಂದಿನ ಅಗತ್ಯ ವಸ್ತ್ತುಗಳ ಬೆಲೆಯನ್ನು ಗಗನಕ್ಕೇರಿಸಿರುವುದೇ ಬಿಜೆಪಿ ಸರಕಾರಗಳ ಸಾಧನೆಯಾಗಿದೆ. 40% ಕಮೀಶನ್ ಹಣೆಪಟ್ಟಿಯನ್ನು ಹೊಂದಿರುವ ರಾಜ್ಯದ ಭೃಷ್ಟ ಬಿಜೆಪಿ ಸರಕಾರವನ್ನು ಬುಡಸಮೇತ ಕಿತ್ತೊಗೆಯಲು ನಾಡಿನ ಜನ ತೀರ್ಮಾನಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ, ನಾಡಿನ ರೈತರ ಬದುಕು ಹಸನಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಹೇಳಿದರು.
ಅವರು ಬುಧವಾರ ಹಳಿಯಾಳ ಪಟ್ಟಣದ ಶಿವಾಜಿ ಮೈದಾನದಲ್ಲಿ ನಡೆದ ಜೆಡಿಎಸ್ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ನವರು ಕನಸು ಕಾಣುತ್ತಿದ್ದಾರೆ. ಅವರ ಕನಸು ಕನಸಾಗಿಯೆ ಉಳಿಯಲಿದೆ. ಜೆಡಿಎಸ್ ಪಕ್ಷ ರೈತರ, ಬಡವರ, ದೀನ ದಲಿತರ, ಕಾರ್ಮಿಕರ ಪರವಾಗಿ ಇರುವ ಪಕ್ಷವಾಗಿದ್ದು, ಬಹುಮುಖ್ಯವಾಗಿ ರೈತರ ಬದುಕು ಹಸನಾಗಿಸಲು ಅಗತ್ಯ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಅತ್ಯಧುನಿಕ ಸೌಕರ್ಯವನ್ನೊಳಗೊಂಡ ಆಸ್ಪತ್ರೆಗಳ ಸ್ಥಾಪನೆ ನಮ್ಮ ಸಂಕಲ್ಪವಾಗಿದೆ. ಹಳಿಯಾಳ, ದಾಂಡೇಲಿ, ಜೋಯಿಡಾ ಮತ ಕ್ಷೇತ್ರ ನನ್ನ ಅತ್ಯಂತ ಪ್ರೀತಿಯ ಕ್ಷೇತ್ರವಾಗಿದ್ದು, ಇಲ್ಲಿಯ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿದೆ. ಇಲ್ಲಿಯ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಒದಗಿಸಲು ಈ ಬಾರಿ ನಿಮ್ಮ ಘೋಟ್ನೇಕರ್ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ಆಶೀರ್ವದಿಸಬೇಕೆಂದು ಮನವಿ ಮಾಡಿದರು. ಇಲ್ಲಿ ಘೋಟ್ನೇಕರ್ ಗೆದ್ದು, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಘೋಟ್ನೇಕರ್ ಅವರಿಗೆ ಸಚಿವಗಿರಿ ಗ್ಯಾರಂಟಿ ಎಂಬುವುದನ್ನು ಪರೋಕ್ಷವಾಗಿ ಹೇಳಿದರು.
ಜೆಡೆಇಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ್ ಅವರು ಮಾತನಾಡಿ ನಮ್ಮ ಕ್ಷೇತ್ರದ ಜನತೆ ಎಚ್.ಡಿ.ಕುಮಾರಸ್ವಾಮಿಯವರ ಮೇಲೆ ವಿಶೇಷವಾದ ಪ್ರೀತಿ ಮತ್ತು ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಈಗಾಗಲೆ ಕ್ಷೇತ್ರದಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಕುಮಾರಣ್ಣನ ಗಮನಕ್ಕೆ ತಂದಿದ್ದೇನೆ. ಕ್ಷೇತ್ರದಲ್ಲಿ ಪಕ್ಷ ಗೆದ್ದು, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೇ ಕ್ಷೇತ್ರದಲ್ಲಿ 40 ವರ್ಷಗಳಿಂದ ಆಗದೇ ಇರುವ ಅಭಿವೃದ್ಧಿ ಕೆಲಸಗಳನ್ನು ಕೇವಲ ಐದು ವರ್ಷಗಳಲ್ಲಿ ಮಾಡುವ ಅಚಲವಾದ ಸಂಕ್ಲಪವನ್ನು ತೊಟ್ಟು ಈ ಬಾರಿ ಚುನಾವಣೆಗೆ ಸ್ಪರ್ಧಿಸಿ ನಿಮ್ಮ ಬಳಿ ಮತಯಾಚಿಸುತ್ತಿದ್ದೇನೆ ಎಂದರು.
ವೇದಿಕೆಯಲ್ಲಿ ಜೆಡಿಎಸ್ ರಾಜ್ಯ ಮುಖಂಡರು, ಜಿಲ್ಲಾ ಮುಖಂಡರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಕಾರ್ಯಕ್ರಮ ಆರಂಭವಾಗುವ ಮುನ್ನ ಎಚ್.ಡಿ.ಕುಮಾರಸ್ವಾಮಿಯವರು ಹಳಿಯಾಳ ಪಟ್ಟಣದಲ್ಲಿರುವ ಶ್ರೀ.ಛತ್ರಪತಿ ಶಿವಾಜಿ ಮೂರ್ತಿಗೆ ಮಾಲಾರ್ಪಣೆಯನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲ್ಲೂಕಿನ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.