ಅಂಕೋಲಾದಲ್ಲಿ ಮೋದಿ ಮೋಡಿ..! ಕಿಕ್ಕಿರಿದು ಸೇರಿದ ಲಕ್ಷಾಂತರ ಜನರು….

ಅಂಕೋಲಾ : 40 ವರ್ಷಗಳ ನಂತರ ದೇಶದ ಪ್ರಧಾನಿಯೋರ್ವರು ಜಿಲ್ಲೆಗೆ ಆಗಮಿಸಿದ್ದು, ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಜಿಲ್ಲೆಯ ಜನರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿಗೆ ದೇಶ, ಜನರ ಹಿತ ಮೊದಲು. ಆದರೆ ಕಾಂಗ್ರೇಸಿಗೆ ಭ್ರಷ್ಟಾಚಾರವೇ ಆದ್ಯತೆ. ಒಂದು ಕುಟುಂಬರ ಪರವಾಗಿ ಮಾತ್ರ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಕಾಂಗ್ರೆಸಿನದ್ದು ಬಯ್ಯುವ ಸಂಸ್ಕೃತಿ. ಹಾಗಾಗಿಯೇ ಕಾಂಗ್ರೆಸ್ ನಾಯಕರು ಮೋದಿಯನ್ನು ತೀವ್ರವಾಗಿ ಬಯ್ಯುತ್ತಿದ್ದಾರೆ. ಇದಕ್ಕೆಲ್ಲಾ ಈ ಬಾರಿ ಕರ್ನಾಟಕದ ಮತದಾರ ಉತ್ತರ ನೀಡಬೇಕಿದೆ ಎಂದರು.

ನಮೋ ಸ್ವಾಗತಕ್ಕೆ  ಸಜ್ಜಾಗಿದ್ದ ಅಂಕೋಲಿಗರು ಹಾಗೂ ಜಿಲ್ಲೆಯ ಜನತೆ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ  ರಾ.ಹೆ 66 ರ ಹಟ್ಟಿಕೇರಿ ಟೋಲ್ ಗೇಟ್ ಪಕ್ಕದ ಗೌರಿಕೆರೆ ಬಳಿ ನಿರ್ಮಿಸಲಾದ ವಿಶೇಷ ಹ್ಯಾಲಿಪ್ಯಾಡನಲ್ಲಿ ಮದ್ಯಾಹ್ನ 1.50 ರ ಸುಮಾರಿಗೆ ಬಂದಿಳಿಯುತ್ತಿದ್ದಂತೆ ಜಯಘೋಷ ಮೊಳಗಿಸಿ ತಮ್ಮ ಪ್ರೀತಿ ಹಾಗೂ ಅಭಿಮಾನ ತೋರ್ಪಡಿಸಿದರು. ಬೆಳಿಗ್ಗೆ 7 ಘಂಟೆಯಿಂದಲೇ ತಾಲೂಕು, ಜಿಲ್ಲೆ ಹಾಗೂ ರಾಜ್ಯ – ಹೊರ ರಾಜ್ಯ  ಸೇರಿದಂತೆ ಜನರ ದಂಡೇ ತಮ್ಮ ನೆಚ್ಚಿನ ಜನ ನಾಯಕನನ್ನು ನೋಡಲು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದರು.. ಖಾಸಗಿ ವಾಹನಗಳು ಸೇರಿ ಸಾವಿರಾರು ವಾಹನಗಳ ಭರಾಟೆ ಜೋರಾಗಿತ್ತು., ಮೋದಿ ಆಗಮನದಿಂದ ಗೌರಿಕೆರೆ ಪ್ರದೇಶದಲ್ಲಿ  ಧೂಳಿನಲ್ಲಿಯೇ ಕಮಲ ಎದ್ದು ರಾರಾಜಿಸುವಂತಾಗಿದೆ..

ಬಿಜೆಪಿ ಪಕ್ಷದ ಪಾಲಿಗಂತೂ ಮೋದಿಯವರ ಈ ಕಾರ್ಯಕ್ರಮ ಆನೆ ಬಲ ತರಲಿದೆ ಎಂದೇ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.ಪಕ್ಷದ ಹಿರಿ-ಕಿರಿಯ ನಾಯಕರು,ಕಾರ್ಯಕರ್ತರ  ಹೊರತಾಗಿ ಮೋದಿಯವರನ್ನು ನೋಡಲೆಂದೇ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದರು. ಎಸ್ ಪಿ ಜಿ ಸೇರಿದಂತೆ  ಸ್ಥಳೀಯ ಪೊಲೀಸರು ಸೇರಿ ಸಾವಿರಾರು ಸಂಖ್ಯೆಯ ರಕ್ಷಣಾ ಸಿಬ್ಬಂದಿಗಳು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಕರಾವಳಿಯ ಮೀನುಗಾರಿಕೆಯ ಅಭಿವೃದ್ಧಿಗೆ ಬಿಜೆಪಿ ಸರಕಾರ ಕಟಿಬದ್ಧವಾಗಿದೆ. ಜಿಲ್ಲೆಯಲ್ಲಿ ಮತ್ಸ್ಯಸಂಪದ ಯೋಜನೆ, ಸಾಗರ ಮಾಲಾ ಯೋಜನೆಗಳ ಮೂಲಕ ಕರಾವಳಿಯ ಅಭಿವೃದ್ಧಿ ನಡೆದಿದೆ. ಶಿರಸಿ ಸುಪಾರಿಗೆ ಜಿಐ ಟ್ಯಾಗ್ ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿದೆ. ಜಿಲ್ಲೆಯ ಹಾಲಕ್ಕಿ ಸಂಸ್ಕೃತಿಯ ಸಾಧಕರನ್ನು ಗುರುತಿಸಿ ಪದ್ಮ ಪುರಸ್ಕಾರ ನೀಡಿದ್ದು ಬಿಜೆಪಿ ಸರಕಾರ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರುಗಳಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವರಾಮ ಹೆಬ್ಬಾರ್, ರೂಪಾಲಿ ನಾಯ್ಕ, ಸುನೀಲ್ ನಾಯ್ಕ, ದಿನಕರ ಶೆಟ್ಟಿ, ಹಳಿಯಾಳ ಬಿಜೆಪಿ ಅಭ್ಯರ್ಥಿ ಸುನೀಲ ಹೆಗಡೆ, ವಿ.ಪ‌.ಸದಸ್ಯ ಶಾಂತಾರಾಮ ಸಿದ್ದಿ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ ಇದ್ದರು.