ಬೆಂಗಳೂರು: ಕೊನೆಗೂ ಕರ್ನಾಟಕದ ಮುಖ್ಯಮಂತ್ರಿ ಹುದ್ದೆ ಸಿದ್ದರಾಮಯ್ಯ(Siddaramaiah) ಅವರಿಗೆ ಒಲಿದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ಎಂದು ಕಾಂಗ್ರೆಸ್ ಹೈಕಮಾಂಡ್ ಇಂದು (ಮೇ 18) ಅಧಿಕೃತ ಘೋಷಣೆ ಮಾಡಿದೆ. ಇದರೊಂದಿಗೆ ಕಳೆದ ನಾಲ್ಕೈದು ದಿನಗಳಿಂದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟ ಕೊನೆಯಾದಂತಾಗಿದೆ. ಇನ್ನು ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ನಾಳೆ(ಮೇ.20) ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೈಕಮಾಂಡ್ ಸರಣಿ ಸಭೆಗಳನ್ನು ಮಾಡುವ ಮೂಲಕ ಮುಂದಿನ ಲೋಕಾಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಅಂತಿಮವಾಗಿ ಸಿದ್ದರಾಮಯ್ಯನವರನ್ನು ಆಯ್ಕೆ ಮಾಡಿದೆ. ಇದರೊಂದಿಗೆ ಕರ್ನಾಟಕ ಸಿಎಂ ಯಾರಾಗುತ್ತಾರೆ ಎನ್ನುವ ಪ್ರಶ್ನೆಗೆ ಇಂದು ತೆರೆ ಬಿದ್ದಿದೆ.
ನಾಳೆ ಪ್ರಮಾಣವಚನ ಸ್ವೀಕರಿಸಲಿರುವ ಸಿದ್ದರಾಮಯ್ಯ
ಇನ್ನು ದೆಹಲಿಯಲ್ಲಿ ಸಿದ್ದರಾಮಯ್ಯನವರ ಅಧಿಕೃತ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಇತ್ತ ಬೆಂಗಳೂರಿನಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ಸಿದ್ದರಾಮಯ್ಯನವರ ಸರ್ಕಾರಿ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಅಲ್ಲದೇ ಹಿರಿಯ ಪೊಲೀಸ್ ಅಧಿಕಾರಿಗಳು ಕಂಠೀರವ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಂಠೀರವ ಸ್ಟುಡಿಯೋನಲ್ಲಿ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ನಾಳೆ(ಮೇ 18) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೀಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬ್ಯಾರಿಕೇಡ್ಗಳನ್ನು ಹಾಕಿಸುತ್ತಿದ್ದಾರೆ. ಇನ್ನು ಕಂಠೀರವ ಕ್ರೀಡಾಂಗಣದಲ್ಲಿ 50 ಸಾವಿರಾರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಗಣ್ಯರು, ಶಾಸಕರು, ಪಕ್ಷದ ಮುಖಂಡರಿಗೆ ಪತ್ಯೇಕ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ.
ನ್ನು ಅಧಿಕತ ಘೋಷಣೆಗೂ ಮುನ್ನ ಸೋನಿಯಾ ಗಾಂಧಿ ನಿವಾಸಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಜೊತೆ ಸುಮಾರು 20 ನಿಮಿಷ ಚರ್ಚೆ ಮಾಡಿದ್ದರು. ಈ ವೇಳೆ ಸಿಎಂ ಸ್ಥಾನವನ್ನು ಮತ್ತೊಮ್ಮೆ ಸೂಕ್ತವಾಗಿ ನಿಭಾಯಿಸಿ. ಆಲ್ ದಿ ಬೆಸ್ಟ್ ಸಿದ್ದರಾಮಯ್ಯಜಿ ಎಂದು ರಾಹುಲ್ ಗಾಂಧಿ ಶುಭಕೋರಿ ತಮ್ಮ ನಿವಾಸದ ಗೇಟ್ವರಗೆ ಬಂದು ಸಿದ್ದರಾಮಯ್ಯಗೆ ಬೀಳ್ಕೊಟ್ಟರು ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ತೆರಳಿ ಬಳಿಕ ಬಂದ ಡಿಕೆ ಶಿವಕುಮಾರ್ ಅವರ ಜೊತೆ ರಾಹುಲ್ ಗಾಂಧಿ ಸಹ ಸುದೀರ್ಘವಾಗಿ ಚರ್ಚೆ ನಡೆಸಿದ್ದು, ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದು ಮನವೊಲಿಸುವ ಪ್ರಯತ್ನಳಗನ್ನು ಮಾಡಿದ್ದಾರೆ. ಆದ್ರೆ, ಡಿಕೆ ಶಿವಕುಮಾರ್ ಬೇಸರಲ್ಲೇ ಹೊರ ಬಂದು ನೇರವಾಗಿ ಮತ್ತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿ ಕೊನೆ ಕ್ಷಣದವರೆಗೂ ಸಿಎಂ ಹಿದ್ದಗೆ ಪಟ್ಟು ಹಿಡಿದರು. ಆದ್ರೆ, ಅದ್ಯಾವುದು ಫಲ ಕೊಡಲಿಲ್ಲ.
ಪಕ್ಷ ಇಷ್ಟೊಂದು ಸ್ಥಾನ ಗೆಲ್ಲುವಲ್ಲಿ ನನ್ನ ಪಾತ್ರವೂ ಸಹ ಇದೆ. ಅಲ್ಲದೇ ನನ್ನ ಮುಖ ನೋಡಿ ಹಳೇ ಮೈಸೂರು ಭಾಗದ ಒಕ್ಕಲಿಗ ಸಮುದಾಯ ಕಾಂಗ್ರೆಸ್ಗೆ ಬೆಂಬಲಿಸಿದೆ. ಹೀಗಾಗಿ ತಮಗೇ ಸಿಎಂ ಪಟ್ಟ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಟ್ಟು ಹಿಡಿದಿದ್ದರು. ಕೊನೆಗೆ ಅಳೆದು ತೂಗಿ, ಎಲ್ಲಾ ಅಂಶಗಳನ್ನು ಅವರ ಗಮನಕ್ಕೆ ತಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಕಾಂಗ್ರೆಸ್ ಹೈ ಕಮಾಂಡ್, ಡಿಕೆ ಶಿವಕುಮಾರ್ ಅವರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ಮುಖ್ಯಮಂತ್ರಿ ಯಾರಾಗಬಹುದೆಂಬ ಎಂಬ ಕುತೂಹಲಕ್ಕೆ ಸದ್ಯಕ್ಕಂತೂ ತೆರೆ ಬಿದ್ದಿದೆ. ಮುಂದೆ ಸಚಿವ ಸಂಪುಟಕ್ಕೆ ಯಾರ್ಯಾರು? ಗ್ಯಾರಂಟಿಗಳು ಹೇಗೆ ಜಾರಿಯಾಗುತ್ತೆ ಎನ್ನುವು ಕುತೂಹಲ ಮೂಡಿಸಿದೆ.