ವಿವಾಹ ಸಮಾರಂಭದಲ್ಲಿ ವಧು-ವರರ ನಡುವೆ ವಿವಾದ- ವಿಷ ಕುಡಿದು ವರ ಸಾವು, ವಧು ಗಂಭೀರ

ಭೋಪಾಲ್: ವಿವಾಹ (Wedding) ಸಮಾರಂಭದಲ್ಲಿ ವಧು (Bride) ಮತ್ತು ವರನ (Groom) ನಡುವೆ ವಿವಾದ ಏರ್ಪಟ್ಟು ಇಬ್ಬರೂ ವಿಷ (Poison) ಕುಡಿದಿದ್ದು, ವರ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್ (Indore) ನಗರದಲ್ಲಿ ನಡೆದಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಎಸ್‌ಐ (SI) ರಂಜಾನ್ ಖಾನ್, ಕನಾಡಿ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆ ಸಮಾರಂಭದ ವೇಳೆ ವಧು-ವರನ ನಡುವೆ ಜಗಳ ನಡೆದಿದ್ದು, ವರ ವಿಷ ಕುಡಿದು ಈ ವಿಷಯವನ್ನು ವಧುವಿಗೆ ತಿಳಿಸಿದ್ದಾನೆ. ವಿಷಯ ತಿಳಿದ ಕೂಡಲೇ ವಧು ಸಹ ವಿಷ ಕುಡಿದಿದ್ದಾಳೆ ಎಂದರು.

ವಿಷ ಕುಡಿದ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಯಿತಾದರೂ, ವರ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ. ವಧು ಸ್ಥಿತಿ ಗಂಭೀರವಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವರನ ಕುಟುಂಬಸ್ಥರು ಹೇಳಿದ ಪ್ರಕಾರ, ವಧು ವರನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ತನ್ನ ಜೀವನ ವೃತ್ತಿಯಿಂದಾಗಿ ವರ ಎರಡು ವರ್ಷಗಳ ಕಾಲಾವಕಾಶವನ್ನು ಕೇಳಿದ್ದ. ಆದರೆ ವಧು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದಿದ್ದಾರೆ. 

ಈ ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.