ಫಣಸೋಲಿ ಅರಣ್ಯ ಪ್ರದೇಶದಲ್ಲಿ ಜಂಗಲ್ ಸಫಾರಿಗೆ ಹೋದ ವಾಹನ ಪಲ್ಟಿ -ಐವರು ಪ್ರವಾಸಿಗರಿಗೆ ಗಾಯ

ದಾಂಡೇಲಿ : ಜಂಗಲ್ ಸಫಾರಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಹಿಂದುರುಗಿ ಬರುತ್ತಿದ್ದ ಬೊಲೆರೊ ಕ್ಯಾಂಪರ್ ವಾಹನವೊಂದು ಪಲ್ಟಿಯಾಗಿ ವಾಹನದಲ್ಲಿದ್ದ ಐವರಿಗೆ ಗಾಯವಾದ ಘಟನೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಫಣಸೋಲಿ ಅರಣ್ಯ ಪ್ರದೇಶದಲ್ಲಿರುವ ಬೆಥಗಿ ಘಾಟ್ ಹತ್ತಿರ ಇಂದು ಶನಿವಾರ ಬೆಳಿಗ್ಗೆ ಗಂಟೆಗೆ ನಡೆದಿದೆ.

ಕೋಲಾರದಿಂದ ಪ್ರವಾಸಕ್ಕೆಂದು ಬಂದಿದ್ದ ಆರು ಜನರ ತಂಡವೊಂದು ಇಂದು ಶನಿವಾರ ಬೆಳಿಗ್ಗೆ ಫಣಸೋಲಿಯ ಜಂಗಲ್ ಸಫಾರಿ ಪಾಯಿಂಟ್ ನಿಂದ ಜಂಗಲ್ ಸಫಾರಿಗೆ ಕೆಎ:35, ಡಿ:3105 ಸಂಖ್ಯೆಯ ಬೊಲೆರೊ ಕ್ಯಾಂಪರ್ ವಾಹನದ ಮೂಲಕ ತೆರಳಿದ್ದರು. ಜಂಗಲ್ ಸಫಾರಿ ಮುಗಿಸಿ ಹಿಂದುರುಗಿ ಬರುತ್ತಿದ್ದ ಬೆಥಗಿ ಘಾಟ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ಕ್ಯಾಂಪರ್ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ವಾಹನದಲ್ಲಿದ್ದ ಕೋಲಾರದ ಒಂದೇ ಕುಟುಂಬಕ್ಕೆ ಸೇರಿದ 35 ವರ್ಷ ವಯಸ್ಸಿನ ಜಾನ್ಸಿ ಶ್ರೀನಿವಾಸ, 40 ವರ್ಷ ವಯಸ್ಸಿನ ಶ್ರೀನಿವಾಸ ಭದ್ರಾಚಾರಿ, 35 ವರ್ಷ ವಯಸ್ಸಿನ ವೈಷ್ಣವಿ ದರ್ಶನ್.ಕೆ, 04 ವರ್ಷ ವಯಸ್ಸಿನ ಋತ್ವಿಕ್ ಭದ್ರ.ಎಸ್ ಮತ್ತು 13 ವರ್ಷ ವಯಸ್ಸಿನ ತೌಶಿಕ್.ಭದ್ರ.ಎಸ್ ಇವರುಗಳಿಗೆ ಗಾಯವಾಗಿದೆ. ಗಾಯಗೊಂಡವರಿಗೆ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ, ಋತ್ವಿಕ್.ಭದ್ರ.ಎಸ್ ಎಂಬಾತನನ್ನು ಬಿಟ್ಟು ಉಳಿದ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ರವಾನಿಸಲಾಗಿದೆ. ಇನ್ನೂ ಚಾಲಕ ರಾಘವೇಂದ್ರ ವಿಷ್ಣು ಪೆಡ್ನೇಕರ್ ಎಂಬಾತನಿಗೆ ಸಣ್ಣಪುಟ್ಟ ಗಾಯವಾಗಿರುವ ಮಾಹಿತಿ ಲಭ್ಯವಾಗಿದೆ.
ಜಂಗಲ್ ಸಫಾರಿಗೆ ಹೋಗಿ ಬರುವ ಸಂದರ್ಭದಲ್ಲಿ ಕನಿಷ್ಟ ವೇಗದಲ್ಲಿ ವಾಹನ ಸಂಚಾರಿಸಿದ್ದರೂ, ಆಕಸ್ಮಿಕವಾಗಿ ಈ ಘಟನೆ ಸಂಭವಿಸಿದ್ದು, ಪ್ರವಾಸಿಗರು ಆತಂಕ ಪಡುವ ಅವಶ್ಯಕತೆಯಿಲ್ಲ.

ಸಾರ್ವಜನಿಕ ಆಸ್ಪತ್ರೆಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸೈ ಕೃಷ್ಣೆಗೌಡ ಹಾಗೂ ಪೊಲಿಸ್ ಸಿಬ್ಬಂದಿಗಳು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಆಸ್ಪತ್ರೆಗೆ ಫಣಸೋಲಿ ವಲಯಾರಣ್ಯಾಧಿಕಾರಿ ರಶ್ಮಿ ದೇಸಾಯಿ ಸೇರಿದಂತೆ ವನ್ಯಜೀವಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.