ಸುಡಾನ್ ದೇಶದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಬಂದ ದಾಂಡೇಲಿಯ ಬಾಂಬೆಚಾಳದ ಇಬ್ಬರು ಯುವಕರು

ದಾಂಡೇಲಿ : ಇಬ್ಬರು ಜನರಲ್ ಗಳ ನಡುವಿನ ಯುದ್ದದಲ್ಲಿ ಹೊತ್ತಿ ಉರಿಯುತ್ತಿರುವ ಸುಡಾನ್ ದೇಶದಿಂದ ಮರಳಿ ತಾಯ್ನಾಡಿಗೆ ಜೀವಂತ ಬರಬಹುದೇ ಎಂಬ ಆತಂಕದಲ್ಲಿ 15 ದಿನಗಳನ್ನು ಕಳೆದ ದಾಂಡೇಲಿ ನಗರದ ಬಾಂಬೆಚಾಳದ ಒಂದೆ ಕುಟುಂಬದ ಇಬ್ಬರು ಆಪರೇಷನ್ ಕಾವೇರಿಯ ಮೂಲಕ ಯಶಸ್ವಿಯಾಗಿ ಇಂದು ಭಾನುವಾರ ಸಂಜೆ ತಾಯ್ನಾಡಿಗೆ ಬಂದಿದ್ದಾರೆ.

ನಗರದ ಬಾಂಬೆಚಾಳದ ಒಂದೇ ಕುಟುಂಬದ ಉದಯಕುಮಾರ್ ಸಿದ್ದಪ್ಪ ಮಾದರ್ ಮತ್ತು ಅವರ ಅಣ್ಣನ ಮಗ ಚೇತನ್ ರಮೇಶ್ ಮಾದರ ಎಂಬಿಬ್ಬರು ಜೀವಭಯದಿಂದ ಮುಕ್ತರಾಗಿ ಇಂದು ದಾಂಡೇಲಿಗೆ ಬಂದು ತಲುಪಿದ್ದಾರೆ. ಉದಯಕುಮಾರ್ ಅವರು ಕಳೆದ 12 ವರ್ಷಗಳಿಂದ ಸುಡಾನ್ ದೇಶದ ಒಂದು ಕಾರ್ಖಾನೆಯಲ್ಲಿ ಬಾಯ್ಲರ್ ಮೆಕಾನಿಕ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ಕಳೆದ ಒಂದು ವರ್ಷದಿಂದ ಅದೇ ಕಾರ್ಖಾನೆಯಲ್ಲಿ ಅವರ ಅಣ್ಣನ ಮಗನಾದ ಚೇತನ್ ರಮೇಶ್ ಮಾದರ ಈತನೂ ಕೆಲಸ ನಿರ್ವಹಿಸುತ್ತಿದ್ದನು.

ಸುಡಾನ್ ನಲ್ಲಿ ಯುದ್ದ ಆರಂಭವಾಗುತ್ತಿದ್ದಂತೆಯೆ ಆತಂಕದ ವಾತವರಣ ನಿರ್ಮಾಣವಾಗಿತ್ತು. ಆದರೂ ಅಲ್ಲಿಯ ಕಾರ್ಖಾನೆಯವರು ಬಹಳ ಮುತುವರ್ಜಿ ವಹಿಸಿ ನೋಡಿಕೊಂಡಿದ್ದರು. ಅಂತಿಮವಾಗಿ ಅವರನ್ನು ಕರೆದುಕೊಂಡು ಹೋಗಲು ಬಂದಿದ್ದ ಹಡಗಿದ್ದ ಸ್ಥಳಕ್ಕೆ 800 ಕೀಮಿ ದೂರದವರೆಗೆ ಕಾರ್ಖಾನೆಯವರೆ ಕದನ ವಿರಾಮದ ಸಂದರ್ಭದಲ್ಲಿ ಬಸ್ ಮೂಲಕ ಕಳುಹಿಸಿಕೊಟ್ಟಿದ್ದರು. ಆನಂತರ ಅಲ್ಲಿಂದ ನಮ್ಮ ದೇಶದ ಅಪರೇಷನ್ ಕಾವೇರಿಯ ಮೂಲಕ ದೆಹಲಿಗೆ ಬಂದು, ದೆಹಲಿಯಿಂದ ಹುಬ್ಬಳ್ಳಿಗೆ ತಲುಪಿ ಇಂದು ಭಾನುವಾರ ಸಂಜೆ ದಾಂಡೇಲಿಗೆ ಬಂದು ಮುಟ್ಟಿದ್ದಾರೆ.

ನಾವು ಮರಳಿ ನಮ್ಮೂರಿಗೆ ಹೋಗುತ್ತೇವೆ ಎಂಬುವುದನ್ನು ಮರೆಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಭಾರತ ಸರಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿ, ನೆರವಿಗೆ ಬಂದಿದೆ ಎಂದು ಉದಯಕುಮಾರ್ ಸಿದ್ದಪ್ಪ ಮಾದರ್ ಮತ್ತು ಅವರ ಅಣ್ಣನ ಮಗ ಚೇತನ್ ರಮೇಶ್ ಮಾದರ ಅವರು ಇಂದು ಭಾನುವಾರ ರಾತ್ರಿ ಮಾಧ್ಯಮಕ್ಕೆ ವಿವರಿಸಿದ್ದಾರೆ. ಇವರಿಬ್ಬರ ಆಗಮನದಿಂದ ಮನೆ ಮಂದಿಯ ಆತಂಕ ದೂರವಾಗಿದ್ದು, ಮನೆಯಲ್ಲಿ ನೆಮ್ಮದಿಯನ್ನು ಕಾಣುವಂತಾಗಿದೆ.