ನಾಳೆ ಕೋಟೆನಾಡಿಗೆ ಪ್ರಧಾನಿ ಮೋದಿ ಭೇಟಿ-ಬಿಗಿ ಪೋಲಿಸ್‌ ಬಂದೋಬಸ್ತ್.


ಚಿತ್ರದುರ್ಗ
: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಚಾರದ ಭರಾಟೆ ಜೋರಾಗಿಯೇ ನಡೆದಿದೆ. ಬಿಜೆಪಿ ಕೇಂದ್ರ ನಾಯಕರು ರಾಜ್ಯದಲ್ಲಿ ರೌಂಡ್ಸ್ ಹಾಕುತ್ತಿದ್ದು, ನಾಲ್ಕು ದಿಕ್ಕಿನಲ್ಲೂ ಕಮಲವನ್ನು ಅರಳಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಪ್ರವಾಸ ಮಾಡುತ್ತಿದ್ದು, ಏ.29 ಮತ್ತು 30 ರಂದು ಎರಡು ದಿನ ಕಲ್ಯಾಣ ಕರ್ನಾಟಕ ಮತ್ತು ಹಳೇ ಮೈಸೂರಿನಲ್ಲಿ ಅಬ್ಬರದ ಪ್ರಚಾರ ಮತ್ತು ರೋಡ್ ಶೋ ನಡೆಸಿದರು. ವೇಳಾಪಟ್ಟಿ ಪ್ರಕಾರ ಇನ್ನು 6 ಬಾರಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಇದರಂತೆ ನಾಳೆ ರಂದು ಬೆಳಿಗ್ಗೆ 10:30ಕ್ಕೆ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. ನಗರದ ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯುವ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.ಮೊದಲು ಒನಕೆ ಓಬವ್ವ ಸ್ಟೇಡಿಯಂಗೆ ಆಗಮಿಸಲಿರುವ ಪ್ರಧಾನಿ ಮೋದಿಯವರು ಅಲ್ಲಿಂದ ಓಕಾರ್ ಮೂಲಕ ಜಯದೇವ ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಈ ಹಿನ್ನೆಲೆ ನಗರದಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ.

ಚಿತ್ರದುರ್ಗದಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಾವಣೆ
ಚಿತ್ರದುರ್ಗದಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಹೊಸ ಹೈವೇ ಮೂಲಕ ಬಸ್ ನಿಲ್ದಾಣಕ್ಕೆ ತೆರಳುವ ವಾಹನಗಳು, ಜೆಎಂಐಟಿ ವೃತ್ತ, ಹೊಸ ಬೈಪಾಸ್ ಮೂಲಕ ಸಂಚರಿಸುವಂತೆ ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರಲ್ಲದೇ ಪ್ರಧಾನಿ ಮೋದಿ ಸಮಾವೇಶದಲ್ಲಿ ಭಾಗಿಯಾಗುವವರು ಕಪ್ಪು ಬಟ್ಟೆ ಧರಿಸುವಂತಿಲ್ಲ, ಬೆಂಕಿಪೊಟ್ಟಣ,‌ ಲೈಟರ್ ತರುವಂತಿಲ್ಲ, ನೀರಿನ ಬಾಟಲ್, ಬ್ಯಾಗ್, ಸ್ಪೋಟಕ‌ ಸಾಮಗ್ರಿಗಳಿಗೆ ನಿರ್ಬಂಧಿಸಲಾಗಿದೆ. ಪ್ಲೇಕಾರ್ಡ್ ಮತ್ತು ಅಪಾಯಕಾರಿ ವಸ್ತುಗಳನ್ನು ತರುವಂತಿಲ್ಲ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಸೂಚಿಸಿದೆ.
ಇನ್ನು ಬೃಹತ್ ಸಮಾವೇಶದಲ್ಲಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಜನ ಭಾಗಿಯಾಗಲಿದ್ದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಬಿಜೆಪಿ ಪ್ರಚಾರ ಸಭೆಗೆ 75ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. 5 ಕಡೆ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ ಬಂದವರಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಲಾಗಿದೆ.ಚಿತ್ರದುರ್ಗದ 6ಕ್ಷೇತ್ರ, ದಾವಣಗೆರೆಯ 4 ಕ್ಷೇತ್ರ ವ್ಯಾಪ್ತಿಯ ಸಮಾವೇಶ ನಡೆಯಲಿದ್ದು,10 ಕ್ಷೇತ್ರದ ಅಭ್ಯರ್ಥಿಗಳ‌ ಪರ ಪ್ರಧಾನಿ ಮೋದಿ ಮತಯಾಚಿಸಲಿದ್ದಾರೆ. 2018 ರಲ್ಲಿ 10ದಲ್ಲಿ ಬಿಜೆಪಿ 8 ಮತಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಿತ್ತು.ಕೋಟೆನಾಡಿನ ಬುಡಕಟ್ಟು ಸಂಸ್ಕೃತಿ ಬಿಂಬಿಸಲು ಜಿಲ್ಲಾ ಬಿಜೆಪಿ ನಾಯಕರು ಪ್ಲಾನ್ ಮಾಡಿಕೊಂಡಿದ್ದು, ಪ್ರಧಾನಿ ಮೋದಿಯವರಿಗೆ ಮ್ಯಾಸ್ ಬೇಡರ ಧಿರಿಸಿನ ಮಾದರಿ ಸನ್ಮಾನ ಮಾಡಲು ಯೋಜನೆ ರೂಪಿಸಿದ್ದಾರೆ. ಹಾಗೇ ತಮಟೆ ಬಾರಿಸಿ ಸಮಾವೇಶ ಉದ್ಘಾಟನೆಗೆ ಬಿಜೆಪಿ ತಯಾರಿ ನಡೆಸಿದೆ ಎನ್ನಲಾಗುತ್ತಿದೆ.ಅಲ್ಲದೇ ಪ್ರಧಾನಿ ಮೋದಿಯವರಿಗೆ ವೀರ ವನಿತೆ ಒನಕೆ ಓಬವ್ವ ವಿಗ್ರಹವನ್ನು ಗಿಫ್ಟ್ ನೀಡಲು‌‌ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಚಿತ್ರದುರ್ಗ-ದಾವಣಗೆರೆಯಲ್ಲಿ ಎಸ್ಸಿ-ಎಸ್ಟಿ ಮತಗಳು ನಿರ್ಣಾಯಕವಾಗಿವೆ. ದಾವಣಗೆರೆ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್, ಚಿತ್ರದುರ್ಗ ಎಂಎಲ್ಸಿ ಕೆ.ಎಸ್.ನವೀನ್ ನೇತೃತ್ವದಲ್ಲಿ ಲಿಂಗಾಯತ ಮತಕ್ಕೆ ಗಾಳ ಹಾಕಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ 5.300ಕೋಟಿ ರೂ ನೀಡಲಾಗಿದೆ. ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಯೋಜನೆ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಸೇರಿ ಇತರೆ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಮಾತನಾಡುವ ಸಾಧ್ಯತೆ ಇದೆ.