ತೀರ್ಥಹಳ್ಳಿ; ಇಡ್ಲಿ ವಿಚಾರಕ್ಕೆ ನಡೆದ ಗಲಾಟೆ ಭೀಕರ ಹತ್ಯೆಯಲ್ಲಿ ಅಂತ್ಯ, ಆರೋಪಿಯ ಬಂಧನ

ಬೆಂಗಳೂರು: ಇಡ್ಲಿ ವಿಚಾರಕ್ಕೆ ಸಂಬಂಧಿಸಿ ಉಂಟಾದ ಜಗಳ ಕಾರ್ಮಿಕರಿಬ್ಬರ ಕೊಲೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕುರುವಳ್ಳಿ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಕುರುವಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ಇಡ್ಲಿ ತಿನ್ನುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ದಾವಣಗೆರೆಯ ಇಬ್ಬರು ಕಟ್ಟಡ ಕಾರ್ಮಿಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ನಗರದ ನಿವಾಸಿಗಳಾದ ಬೀರೇಶ್ (35) ಮತ್ತು ಮಂಜಪ್ಪ (46) ಮೃತ ದುರ್ದೈವಿಗಳು ಎಂದು ಪೊಲೀಸರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ರಾಜಣ್ಣ ಎಂಬಾತ ಬೆಳಿಗ್ಗೆ ಐವರು ಕೆಲಸಗಾರರಿಗೆ ಇಡ್ಲಿ ತಯಾರಿಸಿದ್ದರು. ಊಟಕ್ಕೂ ಅದನ್ನೇ ಸೇವಿಸುವಂತೆ ಹೇಳಿದಾಗ ಕಾರ್ಮಿಕರು ತಗಾದೆ ತೆಗೆದರು. ನಂತರ ಮೂವರ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆ ಜೋರಾಗಿತ್ತು. ಇದರಿಂದ ಕುಪಿತಗೊಂಡ ಬೀರೇಶ್ ಮತ್ತು ಮಂಜಪ್ಪ ಎಂಬುವರು ರಾಜಣ್ಣನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಸೇಡು ತೀರಿಸಿಕೊಳ್ಳಲು ಮುಂದಾದ ರಾಜಣ್ಣ, ಕಾರ್ಮಿಕರು ರಾತ್ರಿ ಮಲಗಿದ್ದ ವೇಳೆ ಗುದ್ದಲಿಯಿಂದ ಕಡಿದು ಕೊಲೆ ಮಾಡಿದ್ದಾನೆ.

ಘಟನಾ ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೀರ್ಥಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿಕೆ ಕೂಡ ಅಪರಾಧ ನಡೆದ ಸ್ಥಳವನ್ನು ಪರಿಶೀಲಿಸಿದ್ದಾರೆ ಎಂದು ವರದಿ ತಿಳಿಸಿದೆ.