ಅಸ್ಸಾಂನ ಲೇಡಿ ಸಿಂಗಂ ಎಂದೇ ಖ್ಯಾತರಾಗಿದ್ದ ವಿವಾದಿತ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಜುನ್ಮೋನಿ ರಾಭಾ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಸ್ಸಾಂ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜುನ್ಮೋನಿ ರಾಭಾ ಅವರ ಸಾವು ನಿಗೂಢ ಎಂದು ಬಣ್ಣಿಸಿರುವ ಕುಟುಂಬವು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದೆ. ಅವರ ಕಾರಿಗೆ ಕಂಟೈನರ್ ಮುಂಭಾಗದಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಅವರು ಡ್ಯೂಟಿಯಲ್ಲಿರಲಿಲ್ಲ ಎನ್ನಲಾಗಿದೆ. ಕಲಿಯಾಬೋರ್ ಉಪವಿಭಾಗದ ಜಖಲಬಂಧ ಪೊಲೀಸ್ ಠಾಣೆ ವ್ಯಾಪ್ತಿಯ ಸರುಭುಗಿಯಾ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಬೆಳಗಿನ ಜಾವ 2.30ರ ಸುಮಾರಿಗೆ ಅಪಘಾತದ ಮಾಹಿತಿ ಲಭಿಸಿದೆ ಎಂದು ಜಖಲಬಂಧ ಪೊಲೀಸ್ ಠಾಣೆಯ ಪ್ರಭಾರಿ ಪವನ್ ಕಲಿತಾ ತಿಳಿಸಿದ್ದಾರೆ. ಸಹೋದರ ಕರುಣಾ ರಭಾ, ‘ನನ್ನ ಸಹೋದರಿ ಗುವಾಹಟಿಯಲ್ಲಿರುವ ಮನೆಯಿಂದ ಹೊರಟು, ತನ್ನ ಸಹೋದ್ಯೋಗಿ ಅಭಾ ರಭಾ ಜೊತೆ ಹೋಗುವುದಾಗಿ ಹೇಳಿದ್ದಳು, ಆದರೆ ನಂತರ ಅವಳು ಒಬ್ಬಂಟಿಯಾಗಿ ಹೋಗಿದ್ದು ತಿಳಿಯಿತು ಎಂದಿದ್ದಾರೆ.
ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ರಾಭಾ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಡಿಕ್ಕಿಯಾದ ಕಂಟೈನರ್ ಟ್ರಕ್ ಯುಪಿಯಿಂದ ಬಂದಿತ್ತು ಎನ್ನಲಾಗಿದೆ, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೋಮವಾರ ಉತ್ತರ ಲಖಿಂಪುರ ಪೊಲೀಸ್ ಠಾಣೆಯಲ್ಲಿ ಜುನ್ಮೋನಿ ವಿರುದ್ಧ ಪ್ರಕರಣ ದಾಖಲಾಗಿದೆ. ಮೇ 6 ರಂದು ನಾಗಾಂವ್‌ನಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡ ಜುನ್ಮೋನಿ ಯಾವುದೇ ಕಾರಣವಿಲ್ಲದೆ ತನ್ನ ಮಗನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರರು ಎಫ್‌ಐಆರ್‌ನಲ್ಲಿ ಆರೋಪಿಸಿದ್ದರು.
ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ ನಾಗಾಂವ್ ಪೊಲೀಸ್ ಅಧೀಕ್ಷಕಿ ಲೀನಾ ಡೋಲ್ ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಸಬ್ ಇನ್ಸ್ ಪೆಕ್ಟರ್ ರಾಭಾ ಒಬ್ಬರೇ ಎಲ್ಲಿಗೆ ಹೋಗುತ್ತಿದ್ದರು ಎಂಬುದು ಮನೆಯವರಿಗಾಗಲಿ, ಪೊಲೀಸರಿಗಾಗಲಿ ಗೊತ್ತಿಲ್ಲ. ರಾಭಾ ಮೊರಿಕೊಲೊಂಗ್ ಪೊಲೀಸ್ ಪೋಸ್ಟ್‌ನ ಉಸ್ತುವಾರಿ ವಹಿಸಿದ್ದರು. ಕಳೆದ ವರ್ಷ ಜೂನ್‌ನಲ್ಲಿ, ಭ್ರಷ್ಟಾಚಾರದ ಆರೋಪದ ಮೇಲೆ ಅವರ ಮಾಜಿ ಗೆಳೆಯನನ್ನು ಬಂಧಿಸಲಾಗಿತ್ತು ಮತ್ತು ಮಜುಲಿ ಜಿಲ್ಲೆಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು. ಬಳಿಕ ಅವರನ್ನು ಅಮಾನತು ಮಾಡಲಾಗಿತ್ತು. ನಂತರ ಮತ್ತೆ ಕೆಲಸಕ್ಕೆ ಮರಳಿದ್ದರು.