ರಾಜಕೀಯ ನಿವೃತ್ತಿ ಘೋಷಿಸಿದ ಶಾರದಾ ಶೆಟ್ಟಿ.

ಕುಮಟಾ : ಟಿಕೆಟ್ ವಿಚಾರದಲ್ಲಿ ಪಕ್ಷ ನನಗೆ ಹಾಗೂ ನನ್ನ ಕಾರ್ಯಕರ್ತರಿಗೆ ಮೋಸ ಮಾಡಿದೆ, ಹೀಗಾಗಿ ಪಕ್ಷದ ಮೇಲಿರುವ ಗೌರವ ನಿಷ್ಠೆ ಇಲ್ಲವಾಗಿದ್ದು, ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಹೇಳಿದರು. ಅವರು ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಕೊನೆ ಕ್ಷಣದವರೆಗೂ ನನಗೆ ಟಿಕೆಟ್ ಸಿಗುವ ಭರವಸೆ ಇತ್ತು. ಆದರೆ ನನಗೆ ಟಿಕೆಟ್ ತಪ್ಪಿಸಿದವರು ಹಾಗೂ ಈಗ ಟಿಕೆಟ್ ಪಡೆದು ಬಂದವರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಭಾವುಕರಾಗಿ ನುಡಿದ ಶಾರದಾ ಶೆಟ್ಟಿ, ನನಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು ಕರೆ ಮಾಡಿ ಎಂ.ಎಲ್. ಸಿ ಅಥವಾ ನಿಗಮಮಂಡಳಿಯ ಅಧ್ಯಕ್ಷ ಸ್ಥಾನ ನೀಡುವುದಾಗಿ ಮನ ಒಲಿಸುವ ಪ್ರಯತ್ನ ಮಾಡಿದರು. ನನಗೆ ಯಾವುದೇ ಅನುಕಂಪವೂ ಬೇಡ ಹುದ್ದೆಯೂ ಬೇಡ ಎಂದು ಅವರು ಬಿರುಸಾಗಿ ಮಾತನಾಡಿದರು.

ಸಾಮಾಜಿಕ ಜಾಲತಾಣದಲ್ಲಿ ಶಾರದಾ ಶೆಟ್ಟಿಯವರಿಗೆ ಸೂಟ್ ಕೇಸ್ ಬಂದಿದೆ ಎಂಬ ಮಾತುಗಳು ಹರಿದಾಡುತ್ತಿದೆ. ಆದರೆ ಮೋಹನ ಶೆಟ್ಟಿಯವರ ಮನೆಯವರದ್ದು ಕೊಡುವ ಕೈ, ಯಾರಿಂದಲೂ ಏನೂ ಪಡೆಯುವ ವಿಚಾರ ಮಾಡಿಲ್ಲ. ನಮ್ಮ ಯಜಮಾನರು ಎಷ್ಟು ಬೇಕೋ ಅಷ್ಟನ್ನು ಮಾಡಿಟ್ಟು ಹೋಗಿದ್ದಾರೆ. ಯಾವುದಕ್ಕೂ ಆಸೆ ಪಡುವುದಿಲ್ಲ –

ಈ ಹಿಂದೆ ಕಾರ್ಯಕರ್ತರು ಪಕ್ಷೇತರವಾಗಿ ನಿಲ್ಲಲೇಬೇಕೆಂದು ಬಲವಾದ ಒತ್ತಡ ತಂದಿದ್ದ ಕಾರಣದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೆ. ಆದರೆ ನಮ್ಮ ಜೊತೆಗಿದ್ದ ಕಾರ್ಯಕರ್ತರು ಹಾಗೂ ಇಲ್ಲೇ ಬೆಳೆದ ಬಹಳಷ್ಟು ಜನ ಕಾರ್ಯಕರ್ತರು ಕಾಂಗ್ರೆಸ್ ನವರ ಅಮಿಷಕ್ಕೋ ಅಥವಾ ಪಕ್ಷವೆಂಬ ಕಾರಣಕ್ಕೋ ಆ ಕಡೆಗೆ ಹೋಗಿದ್ದಾರೆ. ಅದಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತ ನಂತರ ಚಿಹ್ನೆ ಬಂದು ಪ್ರಚಾರ ಪ್ರಾರಂಭ ಮಾಡಿ ಎಲ್ಲೆಡೆ ತಲುಪಲು ಕೇವಲ ೧೪ ದಿನಗಳು ಉಳಿದಿದೆ ಹಾಗಾಗಿ ನಾಮಪತ್ರ ವಾಪಸ್ ಪಡೆಯುವುದಾಗಿ ಅವರು ಹೇಳಿದರು.

ವಿ.ಎಲ್ ನಾಯ್ಕ, ರವಿಕುಮಾರ ಶೆಟ್ಟಿ, ಕೃಷ್ಣಾನಂದ ವರ್ಣೇಕರ್, ತಾರಾಗೌಡ, ಮಧುಸೂಧನ್ ಶೇಟ್, ಮಂಜುನಾಥ ಹರಿಕಂತ್ರ ಇತರರಿದ್ದರು.

ಶಾರದಾ ಶೆಟ್ಟಿ ರಾಜಕೀಯ ನಿವೃತ್ತಿ ಘೋಷಣೆಯ ನಂತರದಲ್ಲಿ ಶಿವಾನಂದ ಹೆಗಡೆಯವರನ್ನು ಸಂಪರ್ಕಿಸಲಾಗಿ, ನನ್ನ ಕಾರ್ಯಕರ್ತರೊಂದಿಗೆ ಮಾತಾಡಿದ ನಂತರ ನನ್ನ ಮುಂದಿನ ನಡೆಯನ್ನು ತಿಳಿಸುವುದಾಗಿ ಕಡತೋಕಾ ಶಿವಾನಂದ ಹೆಗಡೆ ತಿಳಿಸಿದ್ದಾರೆ.