ಮಡಿಕೇರಿ: ಅಟ್ಟೂರು-ನಲ್ಲೂರು ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಮಂಪರು ಮದ್ದು ನಾಟಿದ್ದ ಸುಮಾರು 20 ವರ್ಷದ ಕಾಡಾನೆ 35 ಅಡಿ ಆಳದ ಗುಂಡಿಗೆ ಬಿದ್ದು ಸಾವನ್ನಪ್ಪಿದೆ.
ಈ ಘಟನೆಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಕಾಡಾನೆ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಈ ಪ್ರದೇಶದಲ್ಲಿ ಜನರನ್ನು ಕಾಡುತ್ತಿದ್ದ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಮಂಪರು ಮದ್ದು ನಾಟಿದ ನಂತರ ಅಡ್ಡಾದಿಡ್ಡಿ ಓಡಲು ಆರಂಭಿಸಿದ ಆನೆಯು ಆಕಸ್ಮಿಕವಾಗಿ ಕಡಿದಾದ ಸಿಮೆಂಟ್ ಗುಂಡಿಗೆ ಬಿತ್ತು. ಘಟನೆಯಲ್ಲಿ ಆನೆಯ ಆಂತರಿಕ ಅಂಗಗಳ ವೈಫಲ್ಯವಾಗಿ ಅದು ಸ್ಥಳದಲ್ಲಿಯೇ ಸಾವನ್ನಪ್ಪಿತು ಎಂದು ಆನೆ ಕಾರ್ಯಪಡೆಯ ಡಿಸಿಎಫ್ ಪೂವಯ್ಯ ಪ್ರತಿಕ್ರಿಯಿಸಿದರು.
ಆನೆಯ ಬಲಗಣ್ಣು ದೃಷ್ಟಿ ಸಾಮರ್ಥ್ಯ ಕಳೆದುಕೊಂಡಿತ್ತು. ಹೀಗಾಗಿ ಅದಕ್ಕೆ ಗುಂಡಿ ಇರುವುದು ಕಾಣಿಸಿರಲಿಕ್ಕಿಲ್ಲ ಎನಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ತಕ್ಷಣ ಸ್ಥಳಕ್ಕೆ ಧಾವಿಸಿದ ಪಶುವೈದ್ಯರಾದ ಡಾ. ಚಿಟ್ಟಿಯಪ್ಪ ಮತ್ತು ಡಾ ರಮೇಶ್ ಗ್ಲೂಕೋಸ್ ಮತ್ತು ಇತರ ಔಷಧಿಗಳನ್ನು ನೀಡಿದರು. ಆದರೂ ಆನೆಗಳು ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.