ವಿದ್ಯಾಕಾಶಿ ಧಾರವಾಡದಲ್ಲಿ 26 ನೇ ರಾಷ್ಟ್ರೀಯ ಯುವಜನೋತ್ಸವ: ಪ್ರಧಾನಿ ಮೋದಿಯಿಂದ ಉದ್ಘಾಟನೆ

ಧಾರವಾಡ: ಯುವ ಸಮೂಹವನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಸಲಾಗುತ್ತಿರುವ 26 ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ವಿದ್ಯಾಕಾಶಿ ಧಾರವಾಡ ನವವಧುವಿನಂತೆ ಸಜ್ಜಾಗಿ ನಿಂತಿದೆ. ಈ ಕಾರ್ಯಕ್ರಮದ ವಿಶೇಷ ಅಂದ್ರೆ ಪ್ರಧಾನಿ ಮೋದಿ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲೆಯಾದ್ಯಂತ ಎಲ್ಲೆಡೆ ಬಿಗಿ ಬಂದೋ ಬಸ್ತ್ ಮಾಡಲಾಗಿದೆ.

26 ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವು ಇಂದಿನಿಂದ ಐದು ದಿನಗಳ ಕಾಲ ನಡೆಯಲಿದೆ. ರಾಷ್ಟ್ರಮಟ್ಟದ ಈ ಯುವಜನೋತ್ಸವದಲ್ಲಿ ದೇಶದ ವಿವಿಧೆಡೆಯಿಂದ 7500 ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕೆಸಿಡಿಯಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದ್ದು, ಅದಕ್ಕಾಗಿ ಅದ್ಧೂರಿ ವೇದಿಕೆ ಸಿದ್ಧಪಡಿಸಲಾಗಿದೆ.

ಇಂದು ಮಧ್ಯಾಹ್ನ 3.40 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಸ್ವಾಗತಿಸಲಿದ್ದಾರೆ. ಬಳಿಕ 3.45 ರಿಂದ 4 ಗಂಟೆವರೆಗೂ ಮೋದಿ ರೋಡ್ ಶೋ‌ ನಡೆಸಲಿದ್ದಾರೆ. ಏರ್‌ಪೋರ್ಟ್‌ನಿಂದ ಗೋಕುಲ್ ರಸ್ತೆ, ಅಕ್ಷಯ ಪಾರ್ಕ್, ಹೊಸೂರ್ ಸರ್ಕಲ್, ಐಬಿ ಸರ್ಕಲ್, ದೇಶಪಾಂಡೆ ನಗರ, ಕೋರ್ಟ್ ಸರ್ಕಲ್ ಮೂಲಕ ಹುಬ್ಬಳ್ಳಿ ರೈಲ್ವೆ ಮೈದಾನಕ್ಕೆ ಮೋದಿ ಎಂಟ್ರಿ ಕೊಡಲಿದ್ದಾರೆ.

ಸಂಜೆ 4 ಗಂಟೆ ವೇಳೆಗೆ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಮೋದಿ ಚಾಲನೆ ನೀಡಲಿದ್ದಾರೆ. ನಂತರ ಯುವಸಮೂಹವನ್ನು ಉದ್ದೇಶಿಸಿ ಮಾತನಾಡಿ, ಸಂಜೆ 5.35 ಕ್ಕೆ ಹುಬ್ಬಳ್ಳಿ ಏರ್‌ಪೋರ್ಟ್‌ನಿಂದ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.