ಛತ್ತೀಸ್ಗಢ: ಸರ್ಕಾರಿ ಕಟ್ಟಡಗಳಿಗೆ ಸಗಣಿಯಿಂದ ತಯಾರಿಸಿದ ಪೇಂಟನ್ನು ಬಳಿಯಲು ಇಲ್ಲಿನ ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಪರಿಸರ ಉಳಿಸಲು ವಿಭಿನ್ನ ಹಾಗೂ ಪರಿಸರ ಸ್ನೇಹಿ ಪ್ರಯತ್ನವನ್ನು ಸರ್ಕಾರ ಕೈಗೊಂಡಿದೆ. ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಗೋವಿನ ಸಗಣಿಯಿಂದ ತಯಾರಿಸಿದ ಪೇಂಟ್ ಬಳಸಲಾಗುತ್ತಿದ್ದು, ಇದರಿಂದ ಗ್ರಾಮೀಣ ಪ್ರದೇಶ ಹಾಗೂ ಮಹಿಳೆಯರ ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗಲಿದೆ.
ಸಗಣಿ ಬಳಸಿ ತಯಾರಿಸಿದ ಪೇಂಟ್ನಲ್ಲಿ ಕೀಟನಾಶಕಗಳು ಇರುವುದರಿಂದ ವೈಜ್ಞಾನಿಕವಾಗಿಯೂ ಇದು ಸಹಾಯ ಮಾಡುತ್ತದೆ. 2021 ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಖಾದಿ ಪ್ರಕೃತಿಕ ಪೇಂಟ್ ಯೋಜನೆಯನ್ನು ಪ್ರಾರಂಭಿಸಿದ್ದರು. ಈ ಯೋಜನೆಯಿಂದ ದೇಶದಲ್ಲೇ ಮೊದಲ ಬಾರಿಗೆ ಹಸುವಿನಿಂದ ತಯಾರಿಸಿದ ಪೇಂಟ್ ಪರಿಚಯಿಸಲಾಗಿತ್ತು.
ರಾಯ್ಪುರ್ ಹಾಗೂ ಕನ್ಕೇರ್ನಲ್ಲಿ ಸಗಣಿ ಬಳಸಿ ಬಣ್ಣ ತಯಾರಿಸುವ ಘಟಕಗಳನ್ನು ಸ್ಥಾಪಿಸಲು ಸಿದ್ಧತೆ ನಡೆಸಲಾಗುತ್ತಿದೆ. 2023 ರ ಜನವರಿ ವೇಳೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಸಗಣಿಯಿಂದ ಪೇಂಟ್ ತಯಾರಿಸುವ ತಂತ್ರಜ್ಞಾನ ವಿಸ್ತರಿಸಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಈ ಹೊಸ ಬಣ್ಣದಲ್ಲಿ ಕಾರ್ಬಾಕ್ಸಿ ಮೀಥೈಲ್ ಸೆಲ್ಯುಲೋಸ್ ಮುಖ್ಯವಾದ ವಸ್ತುವಾಗಿದ್ದು, 100 ಕೆ.ಜಿ. ಗೋವಿನ ಸಗಣಿಯಿಂದ 10 ಕೆ.ಜಿ ಒಣ ಕಾರ್ಬಾಕ್ಸಿಮೀಥೈಲ್ ಸೆಲ್ಯುಲೋಸ್ ತಯಾರಿಸಿ ಅದರ ಮೂಲಕ ಬಣ್ಣ ತಯಾರಿಸುತ್ತಾರೆ. ಒಟ್ಟಾರೆ ಬಣ್ಣದಲ್ಲಿ ಶೇ.30 ರಷ್ಟು ಪಾಲು ಕಾರ್ಬಾಕ್ಸಿಮೀಥೈಲ್ ಸೆಲ್ಯುಲೋಸ್ನದ್ದಾಗಿರುತ್ತದೆ.