ಮಂಗಳೂರು: ಸುರತ್ಕಲ್ ಬಳಿಯ ಕಾಟಿಪಳ್ಳದ ನಾಲ್ಕನೇ ಬ್ಲಾಕ್ನಲ್ಲಿ ಫಾತಿಮಾ ಸ್ಟೋರ್ ಬಳಿ ಡಿ.24 ರ ರಾತ್ರಿ 8:30 ರ ಸುಮಾರಿಗೆ ಘನಘೋರ ದುರಂತ ನಡೆದಿದೆ.
ಸ್ಟೋರ್ ಮಾಲೀಕ ಅಬ್ದುಲ್ ಜಲೀಲ್ ಅಂಗಡಿ ಬಾಗಿಲು ಮುಚ್ಚಿ ಮನೆಗೆ ಹೊರಡುವ ವೇಳೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಕ್ಷುಲ್ಲಕ ವಿಚಾರಕ್ಕೆ ಮಾತಿಗಿಳಿದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕಿಡಿಗೇಡಿಗಳು ಏಕಾಏಕಿ ಚಾಕು ತೆಗೆದು ಜಲೀಲ್ಗೆ ಇರಿದು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೆಕ್ಷನ್ 144 ಹಾಕಲಾಗಿದೆ.
ಇದರ ಹಿನ್ನೆಲೆಯಲ್ಲಿ ಸುರತ್ಕಲ್ ಸೇರಿದಂತೆ ಹಲವೆಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸುರತ್ಕಲ್, ಬಜ್ಪೆ, ಕಾವೂರು, ಪಣಂಬೂರು ವ್ಯಾಪ್ತಿಯಲ್ಲಿ ಇಂದಿನಿಂದ ಡಿ.27 ರ ಬೆಳಗ್ಗೆ 6 ಗಂಟೆ ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶಿಸಿದ್ದಾರೆ. ತುರ್ತು ಸೇವೆಗಳಿಗೆ, ಕ್ರಿಸ್ಮಸ್ ಹಬ್ಬ ಆಚರಣೆಗೆ ಅನುಮತಿ ನೀಡಲಾಗಿದೆ.
ಇನ್ನೂ ಸುರತ್ಕಲ್ ಸುತ್ತಮುತ್ತ ಮದ್ಯ ಮಾರಾಟ ನಿಷೇಧಿಸಲಾಗಿದ್ದು, ಸುರತ್ಕಲ್, ಬಜ್ಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 10 ರಿಂದ ಡಿ.27 ಬೆಳಗ್ಗೆ 10 ರವರೆಗೂ ನಿಷೇಧ ಹೇರಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.