ಹತ್ಲಂಗಾ ಸೆಕ್ಟರ್‌ನಲ್ಲಿ ಮೂವರು ಉಗ್ರರ ಹತ್ಯೆ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ವಶಕ್ಕೆ.!

ಜಮ್ಮು ಕಾಶ್ಮೀರ: ಬಾರಾಮುಲ್ಲಾ ಜಿಲ್ಲೆಯ ಉರಿಯ ಹತ್ಲಂಗಾ ಸೆಕ್ಟರ್‌ನಲ್ಲಿ ಸೇನೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

8 ಎಕೆ 74ಯು, 24 ಎಕೆ 74 ಮ್ಯಾಗಜಿನ್‌ಗಳು, 12 ಚೈನೀಸ್ ಪಿಸ್ತೂಲ್‌ಗಳು, 24 ಪಿಸ್ತೂಲ್ ಮ್ಯಾಗಜೀನ್‌ಗಳು, 9 ಚೈನೀಸ್ ಗ್ರೆನೇಡ್‌ಗಳು, 5 ಪಾಕ್ ಗ್ರೆನೇಡ್‌ಗಳು, 5 ಗೋಧಿ ಚೀಲಗಳು, 81 ಪಾಕ್ ಬಲೂನ್‌ಗಳು, 560 ರೌಂಡ್‌ಗಳ ಎಕೆ ರೈಫಲ್‌ಗಳು ಮತ್ತು 24 ರೌಂಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ಆರು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿರುವ ಉತ್ತರ ಕಾಶ್ಮೀರದ ಉರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿ ಭಾರಿ ಶಸ್ತ್ರಸಜ್ಜಿತ ಮೂವರು ಉಗ್ರರನ್ನು ಹತ್ಯೆಗೈದು, ಭಾರಿ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿಯೂ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ.

ಉರಿಯ ಹತ್ಲಂಗಾ ಪ್ರದೇಶದಲ್ಲಿ ಬೆಳಿಗ್ಗೆ 6 ಗಂಟೆಗೆ ಸೇನೆಯು ಉಗ್ರರ ಗುಂಪನ್ನು ಗುರುತಿಸಿದೆ. ಈ ವೇಳೆ ಉಗ್ರರ ಗುಂಪಿಗೆ ಸವಾಲೆಸೆಯಲಾಯಿತು ಮತ್ತು ಸಂಕ್ಷಿಪ್ತ ಗುಂಡಿನ ವಿನಿಮಯದಲ್ಲಿ ಮೂವರು ಉಗ್ರರು ಕೊಲ್ಲಲ್ಪಟ್ಟರು” ಎಂದು 15 ಕಾರ್ಪ್ಸ್ನ ಜನರಲ್ ಆಫೀಸರ್ ಕಮಾಂಡಿಂಗ್, ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಹೇಳಿದ್ದಾರೆ.