ರಾಜ್ಯ ಸರ್ಕಾರಿ ನೌಕರರ ಎನ್‍ಪಿಎಸ್ ರದ್ಧತಿಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಶಾಸಕ ಸುನಿಲ್ ನಾಯ್ಕ ಮನವಿ

ಭಟ್ಕಳ: ರಾಜ್ಯ ಸರ್ಕಾರಿ ನೌಕರರ ಭವಿಷ್ಯದ ಹಿತದೃಷ್ಟಿಯಿಂದ ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆಯ ನಿಶ್ಚಿತ ಪಿಂಚಣಿ ವ್ಯವಸ್ಥೆಯನ್ನು ಮರುಜಾರಿಗೊಳಿಸಬೇಕು ಎಂದು ಆಗ್ರಹಿಸಿ ಶಾಸಕ ಸುನಿಲ್ ನಾಯ್ಕ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕಳೆದ 2006, ಏಪ್ರಿಲ್ 1 ರಿಂದ ಸರಕಾರಿ ಸೇವೆಗೆ ಸೇರಿರುವ ರಾಷ್ಟ್ರೀಯ ಪಿಂಚಣಿ ಯೋಜನೆಗಳಿಗೆ ಒಳಪಡುವ ನೌಕರರ ಸಂಧ್ಯಾ ಕಾಲದ ಬದುಕಿಗೆ ಭದ್ರತೆಯನ್ನು ತಂದು ಕೊಡುವ ನಿಟ್ಟಿನಲ್ಲಿ ಹಾಗೂ ಈಗಾಗಲೇ ಮರಣ ಹೊಂದಿರುವ ಎನ್‍ಪಿಎಸ್ ನೌಕರರ ಅವಲಂಬಿತ ಕುಟುಂಬಗಳಿಗೆ ನ್ಯಾಯ ಒದಗಿಸುವ ಹಂಬಲದೊಂದಿಗೆ ಕರ್ನಾಟಕ ರಾಜ್ಯ ಎನ್‍ಪಿಎಸ್ ಸರ್ಕಾರಿ ನೌಕರರ ಸಂಘ ಕಾರ್ಯನಿರ್ವಹಿಸುತ್ತಿದೆ. ಎನ್‍ಪಿಸಿ ವ್ಯವಸ್ಥೆಯನ್ನು ರದ್ದುಗೊಳಿಸಿ ರಾಜ್ಯ ಸರ್ಕಾರಿ ನೌಕರರಿಗೆ ಈ ಹಿಂದಿನಂತೆ ಠೇವಣಿ ಸೌಲಭ್ಯವನ್ನು ಒದಗಿಸುವಂತೆ ಸಂಘವು ಮನವಿ ಸಲ್ಲಿಸಿದೆ.

ಸಂಘದ ಸದರಿ ಮನವಿಯನ್ನು ಸರ್ಕಾರ ಪರಿಗಣಿಸಿ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತುರ್ತಾಗೆ ದೆಹಲಿಗೆ ತೆರಳಿದ ಕಾರಣ ಅವರ ವಿಶೇಷಾಧಿಕಾರಿ ರಂಗರಾಜು ಶಾಸಕರಿಂದ ಮನವಿ ಸ್ವೀಕರಿಸಿದರು. ಈ ಕುರಿತು ಮಾಹಿತಿ ನೀಡಿರುವ ಶಾಸಕರು, ಸರಕಾರಿ ನೌಕರರ ಪರ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.