ಪಾಕ್​ ಸಲಹೆ ಸ್ವೀಕರಿಸುವಷ್ಟು ಒಳ್ಳೆಯ ದೇಶ ಅಲ್ಲ – ಸಚಿವ ಜೈ ಶಂಕರ್

ನವದೆಹಲಿ: ಪಾಕಿಸ್ತಾನವನ್ನು ಭಯೋತ್ಪಾದನೆಯ ಕೇಂದ್ರ ಬಿಂದುವಾಗಿ ವಿಶ್ವ ನೋಡುತ್ತಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಅವರು ಯುಎನ್​ ಸೆಕ್ಯೂರಿಟಿ ಕೌನ್ಸಿಲ್​ ಅಧ್ಯಕ್ಷತೆ ವಹಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಸಮಕಾಲೀನ ಭಯೋತ್ಪಾದನೆ ಕೇಂದ್ರ ಬಿಂದುವಾದ ಪಾಕಿಸ್ತಾನ​ ಇನ್ನೂ ಸಕ್ರಿಯವಾಗಿದೆ. ಮನೆಯ ಹಿತ್ತಲಿನ ಹಾವುಗಳು ನೆರೆಹೊರೆಯವರನ್ನು ಮಾತ್ರ ಕಚ್ಚಲ್ಲ. ಬೇರೆಯವರನ್ನೂ ಕಚ್ಚುತ್ತವೆ ಅಂತಾ ದಶಕದ ಹಿಂದೆ ಅಮೆರಿಕದ ಹಿಲರಿ ಕ್ಲಿಂಟನ್ ಹೇಳಿರುವ ಮಾತನ್ನು ಪಾಕ್​ನ ವಿದೇಶಾಂಗ ರಾಜ್ಯ ಸಚಿವೆ ಹೀನಾ ರಬ್ಬಾನಿ‌ ಖಾರ್​ಗೆ ಜೈಶಂಕರ್ ನೆನಪಿಸಿದರು. ನಾವು ಮತ್ತೊಮ್ಮೆ ನ್ಯೂಯಾರ್ಕ್ ಮೇಲಿನ 9/11 ಮತ್ತು ಮುಂಬೈ ಮೇಲಿನ 26/11 ದಾಳಿಗೆ ಅವಕಾಶ ಕೊಡಲ್ಲ ಎಂದಿದ್ದಾರೆ.

ಈ ಸಂದರ್ಭದಲ್ಲಿ ಪಾಕ್ ಪತ್ರಕರ್ತ, ಎಲ್ಲಿಯವರೆಗೆ ದಕ್ಷಿಣ ಏಷ್ಯಾದಲ್ಲಿ ಭಾರತ, ಅಫ್ಘಾನಿಸ್ತಾನ, ಪಾಕಿಸ್ತಾನದಿಂದ ಭಯೋತ್ಪಾದನೆ ನೋಡುತ್ತಿರಬೇಕು? ಎಲ್ಲಿಯವರೆಗೆ ಈ ದೇಶಗಳು ಯುದ್ಧ ಮಾಡುತ್ತಿರುತ್ತವೆ? ಎಂದು ಜೈ ಶಂಕರ್​ಗೆ ಪ್ರಶ್ನೆ ಕೇಳಿದರು.

ಜೈಶಂಕರ್ ಪ್ರತಿಕ್ರಿಯಿಸಿದ್ದು, ನೀವು ಈ ಪ್ರಶ್ನೆಗಳನ್ನ ನನಗೆ ಕೇಳಬಾರದು. ಪಾಕಿಸ್ತಾನ ಎಲ್ಲಿಯವರೆಗೆ ಭಯೋತ್ಪಾದನೆ ನಡೆಸಬೇಕು ಎಂದು ಬಯಸಿದೆ ಅನ್ನೋದು ಪಾಕಿಸ್ತಾನದ ಮಂತ್ರಿ‌ ನಿಮಗೆ ಹೇಳುತ್ತಾರೆ. ಹೀಗಾಗಿ ನೀವು ನಿಮ್ಮ ಸಚಿವರನ್ನೇ ಕೇಳಬೇಕು ಎಂದು ಉತ್ತರಿಸಿದ್ದಾರೆ. ಅಲ್ಲದೇ, ಸಲಹೆ ಸ್ವೀಕರಿಸುವಷ್ಟು ಒಳ್ಳೆಯ ದೇಶ ಪಾಕ್​ ಅಲ್ಲ. ಬೇರೆ ದೇಶಗಳ ವಿರುದ್ಧ ಅಫ್ಘಾನಿಸ್ತಾನದ ಭೂಮಿ ಬಳಕೆಯಾಗುತ್ತಿದೆ. ಇದು ಆಗಬಾರದು. ಸಾಕ್ಷ್ಯಾಧಾರದ ಪ್ರಸ್ತಾಪಗಳಿಗೆ ಯಾವುದೇ ಕಾರಣ ನೀಡದೇ ತಡೆಯೊಡ್ಡಲಾಗಿದೆ ಎಂದರು.