ಭಟ್ಕಳ: ಉಸಿರಾಟದ ಸಮಸ್ಯೆಯಿಂದ ಮೃತರಾದ ಬೈಲೂರಿನ ರೈತ ರಾಮ ಪರಮಯ್ಯ ದೇವಾಡಿಗ (79) ರ ನೇತ್ರದಾನಕ್ಕೆ ಮೃತರ ಕುಟುಂಬದವರು ಒಪ್ಪಿಗೆ ಸೂಚಿಸಿದ್ದು, ಉಡುಪಿಯ ಪ್ರಸಾದ ನೇತ್ರಾಲಯದ ವೈದ್ಯರು, ಸಿಬ್ಬಂದಿಗಳು ತಾಲೂಕಾ ಸರಕಾರಿ ಆಸ್ಪತ್ರೆಗೆ ಆಗಮಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.
ಈ ಸಂದರ್ಭದಲ್ಲಿ ಮೃತರ ಪುತ್ರ ಪ್ರದೀಪ ದೇವಾಡಿಗ ಮಾತನಾಡಿ, ಅವರಿಂದ ನಾಲ್ಕು ಜನರಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಇದು 2 ನೇ ನೇತ್ರದಾನವಾಗಿದೆ. ಬಹಳ ಜನರಿಗೆ ನೇತ್ರದಾನದ ಬಗ್ಗೆ ತಪ್ಪು ತಿಳುವಳಿಕೆ ಇದೆ. ನೇತ್ರದಾನ ಪುಣ್ಯದ ಕೆಲಸವಾಗಿದ್ದು, ಉಳಿದವರೂ ಈ ಬಗ್ಗೆ ಚಿಂತನೆ ನಡೆಸಬೇಕು. ಮರಣದ ಪೂರ್ವದಲ್ಲಿಯೇ ಈ ಬಗ್ಗೆ ಒಪ್ಪಿಗೆ ಪತ್ರ ನೀಡಬೇಕು ಎಂದೇನೂ ಇಲ್ಲ. ಮರಣದ ನಂತರ ಅವರ ಕುಟುಂಬದವರು ಇಚ್ಛಿಸಿದ್ದಲ್ಲಿ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಮೃತ ರಾಮ ದೇವಾಡಿಗ ನಾಲ್ವರು ಪುತ್ರಿಯರು, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದು, ಬೈಲೂರಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.